ಉಡುಪಿ: ಉಡುಪಿಯ ಸುಧಾಕರ ಆಚಾರ್ಯರ ಕಲಾರಾಧನೆಯ ತ್ರಿಂಶತಿ ಆಚರಣೆ ಪ್ರಯುಕ್ತ ಸ್ವಾತಂತ್ರ್ಯೋತ್ಸವ ತಾಳಮದ್ದಲೆ -ತುಳು ಯಕ್ಷಗಾನ ವೈಭವ ಕಾರ್ಯಕ್ರಮ ಆ. 15ರಂದು ಉಡುಪಿ ಪಿಪಿಸಿ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಮಧ್ಯಾಹ್ನ 1.30ಕ್ಕೆ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಅಂಬೆ ತಾಳ ಮದ್ದಲೆ ಹಾಗೂ ಸಂಜೆ 6ಗಂಟೆಗೆ ‘ತುಳುನಾಡ ಬಲಿಯೇಂದ್ರ’ ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕ ಸುಧಾಕರ ಆಚಾರ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಕಟೀಲಿನ ಅರ್ಚಕ ಹರಿನಾರಾಯಣ ಅಸ್ರಣ್ಣ ಉದ್ಘಾಟಿಸುವರು. ಶ್ರೀಕ್ಷೇತ್ರ ಧರ್ಮಸ್ಥಳದ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು.
ಶಾಸಕ ಕೆ. ರಘುಪತಿ ಭಟ್, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಮೇಳಗಳ ಮಾಲೀಕರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಪಳ್ಳಿ ಕಿಶನ್ ಹೆಗ್ಡೆ, ಕೆರೆಮನೆ ಶಿವಾನಂದ ಹೆಗಡೆ ಅವರನ್ನು ಸನ್ಮಾನಿಸಲಾಗುವುದು.
ಹಾಗೂ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮುಂಬೈ ಅವರಿಗೆ ತ್ರಿಂಶತಿ ಆಚರಣೆಯ ಕಲಾ ಗೌರವ ನೀಡಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಭುವನಪ್ರಸಾದ್ ಹೆಗ್ಡೆ, ಪೆರ್ಡೂರು ರತ್ನಾಕರ ಕಲ್ಯಾಣಿ ಇದ್ದರು.