ಭಾರತದಲ್ಲಿ ಶೀಘ್ರವೇ ಕೊರೊನಾ ಲಸಿಕೆ ಉತ್ಪಾದನೆ: ಮೂರು ಔಷಧಿ ಪ್ರಾಯೋಗಿಕ ಹಂತದಲ್ಲಿದೆ: ಪ್ರಧಾನಿ ಮೋದಿ

ನವದೆಹಲಿ: ಭಾರತದಲ್ಲಿ ಶೀಘ್ರವೇ ಕೊರೊನಾ ಲಸಿಕೆ ಕಂಡುಹಿಡಿಯುವುದರ ಜತೆಗೆ ಭಾರೀ ಪ್ರಮಾಣದಲ್ಲಿ ಔಷಧಿ ಉತ್ಪಾದನೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿಯ ಕೆಂಪು ಕೋಟೆಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ದೇಶದ ವಿಜ್ಞಾನಿಗಳು ಕೊರೊನಾ ಲಸಿಕೆಯ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಭಾರತದಲ್ಲಿ ಮೂರು ಕೊರೊನಾ ಔಷಧಿ ಪ್ರಾಯೋಗಿಕ ಹಂತದಲ್ಲಿದೆ. ಆದಷ್ಟು ಬೇಗ ಜನರಿಗೆ ಔಷಧಿ ತಲುಪಿಸಲು ಪ್ರಯತ್ನ ಮಾಡಲಾಗುವುದು ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರಕ್ಕೆ ಅಡಿಗಲ್ಲು ಹಾಕಲಾಗಿದೆ. ಅಭಿವೃದ್ಧಿ ಪಥದಲ್ಲಿ ಬೇಕಾದ ಎಲ್ಲ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಭಾರತ ಜಗತ್ತಿನ ಯಾವುದೇ ದೇಶಕ್ಕಿಂತಲೂ ಕಡಿಮೆ ಇಲ್ಲ. ನಾವು ಎಷ್ಟು ಶಕ್ತಿಶಾಲಿ ಎನ್ನುವುದನ್ನು ಇಡೀ ವಿಶ್ವಕ್ಕೆ ತೋರಿಸಬೇಕಿದೆ ಎಂದು ಹೇಳಿದರು.
ಭಾರತ ದೇಶ ಶಾಂತಿ ಬಯಸುತ್ತದೆ. ನಾವು ಭಯೋತ್ಪಾದನೆ, ವಿಸ್ತಾರವಾದವನ್ನು ಎದುರಿಸುತ್ತಿದ್ದೇವೆ. ನಮ್ಮ ತಂಟೆಗೆ ಬಂದರೆ ನಾವು ಯಾರನ್ನು ಸಹ ಬಿಡುವುದಿಲ್ಲ. ಭಾರತ ಭೂ ಗಡಿ, ವಾಯು ಗಡಿ, ಸಮುದ್ರಗಡಿ ರಕ್ಷಣೆಯಲ್ಲಿ ಶಕ್ತವಾಗಿದೆ ಎಂದರು.
ಭಾರತದಲ್ಲಿ ರಕ್ಷಣಾ ವಲಯದ 101 ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ನಿರ್ಧಾರ. ಬಂದೂಕು, ಹೆಲಿಕಾಪ್ಟರ್, ರಕ್ಷಣಾ ವಾಹಗಳನ್ನು ನಿರ್ಮಿಸಲಾಗುವುದು. ಭಾರತದ ಕರಾವಳಿ ಜಿಲ್ಲೆಗಳಲ್ಲಿ ಎನ್ ಸಿಸಿ ಜಾಲ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.