ಪಡುಕೆರೆಯಲ್ಲಿ ಮರೀನಾ ಅಲ್ಲ, ಮೀನುಗಾರರ ಬದುಕಿನ ಮೇಲೆ ಸಮಾಧಿ ನಿರ್ಮಾಣಕ್ಕೆ ಪ್ರಯತ್ನ: ರಮೇಶ್ ಕಾಂಚನ್

ಉಡುಪಿ: ಪಡುಕೆರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮರೀನಾದಿಂದ ಮೀನುಗಾರರಿಗೆ ಯಾವುದೇ ಲಾಭ ಇಲ್ಲ. ಇದು ಮೀನುಗಾರರ ಬದುಕಿನ ಮೇಲೆ ಸಮಾಧಿ ನಿರ್ಮಿಸಲು ಪ್ರಯತ್ನ ನಡೆದಿದೆ ಎಂದು ನಗರಸಭಾ ಸದಸ್ಯ, ವಿಪಕ್ಷ ನಾಯಕ ರಮೇಶ್ ಕಾಂಚನ್ ಹೇಳಿದ್ದಾರೆ.

ಬಹು ಕೋಟಿ ವೆಚ್ಚದ ಮರೀನಾ ಅಭಿವೃದ್ಧಿ ಯಿಂದ ಮಲ್ಪೆ, ಪಡುಕೆರೆ ಭಾಗದ ಮೀನುಗಾರರಿಗೆ ನಷ್ಟ ಬಿಟ್ಟರೆ ಯಾವುದೇ ಲಾಭ ಇಲ್ಲ. ಇಷ್ಟೊಂದು ಮುತುವರ್ಜಿಯಿಂದ ಮರೀನಾ ಅಭಿವೃದ್ಧಿ ಗೆ ಶಾಸಕರೇಕೆ ಮುಂದಾಗುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಇಲ್ಲಿನ ಮರೀನಾ ದೇಶದ ದೊಡ್ಡ ಮರೀನಾ ಎಂದು ಹೇಳಲಾಗುತ್ತಿದೆ. ಈಗಾಗಲೇ ಪಡುಕೆರೆ ಭಾಗದಲ್ಲಿ ಬದುಕು ಕಟ್ಟಿಕೊಂಡವರು ಗಂಟುಮೂಟೆ ಕಟ್ಟಿ ಹೋಗಬೇಕಾದ ಪ್ರಮೇಯ ಬರಬಹುದು.

ಶಾಸಕರಿಗೆ ಮೀನುಗಾರರ ಬಗ್ಗೆ ಕಾಳಜಿ ಇದ್ದರೆ ಮಲ್ಪೆ ಬಂದರು ಅಭಿವೃದ್ದಿ ಸೇರಿದಂತೆ ಅವಶ್ಯಕ ಮೂಲಭೂತ ವ್ಯವಸ್ಥೆ ಕಲ್ಪಿಸಲು ಮುಂದಾಗಲಿ. ಅದನ್ನು ಬಿಟ್ಟು ಈಗಾಗಲೇ ಸಂಕಷ್ಟದಲ್ಲಿರುವ ಮೀನುಗಾರರ ಬದುಕಿಗೆ ಕೊಳ್ಳಿ ಇಡಬೇಡಿ ಅಂತ ಆಗ್ರಹಿಸಿದ್ದಾರೆ.