ಸಹಕಾರಿ ರಂಗದಲ್ಲಿ ಹೊಸ ಮನ್ವಂತರ ಸೃಷ್ಟಿಸಲು ಪ್ರಯತ್ನ: ಬೋಳ ಸದಾಶಿವ ಶೆಟ್ಟಿ

ಉಡುಪಿ: ಕಳೆದ ಮೂರು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಸಹಕಾರ ಭಾರತಿ ಸಂಘಟನೆಯಾಗಿ ಬಹಳಷ್ಟು ಬೆಳೆದಿದ್ದು, ತನ್ನ ಕ್ರಿಯಾಶೀಲ ಕಾರ್ಯಕರ್ತರ ಪಡೆಯ ಸಹಕಾರದೊಂದಿಗೆ ಸಹಕಾರಿ ರಂಗದಲ್ಲಿ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದೆ. ಸಾಮೂಹಿಕ ನಾಯಕತ್ವ, ಪ್ರಾಮಾಣಿಕತೆ ಮತ್ತು ಆಧುನಿಕ ದೃಷ್ಟಿಕೋನದೊಂದಿಗೆ ಸಹಕಾರ ಭಾರತಿಯು ಸಹಕಾರಿ ಸಂಘದಿಂದ ಸದಸ್ಯರತ್ತ ತೆರಳುತ್ತಿದ್ದು, ಇದಕ್ಕೆ ಅಭೂತಪೂರ್ವ ಸಹಕಾರಿಗಳ ಬೆಂಬಲ ದೊರೆತಿದೆ ಎಂದು ಸಹಕಾರ ಭಾರತಿ ಉಡುಪಿ ಜಿಲ್ಲಾ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಹೇಳಿದರು.

ಉಡುಪಿ ನೈವೇದ್ಯ ಹೋಟೆಲಿನ ಅನುಗ್ರಹ ಸಭಾಂಗಣದಲ್ಲಿ ನಡೆದ ಸಹಕಾರ ಭಾರತಿ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಸಹಕಾರಿ ರಂಗದ ಸದಸ್ಯರ ತರಬೇತಿ ಹಾಗೂ ಆಂದೋಲನ ಮೂಲಕ ಸಹಕಾರಿ ರಂಗದಲ್ಲಿ ಹೊಸ ಮನ್ವಂತರ ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದೆ. ಎಲ್ಲಾ ಸಹಕಾರಿಗಳು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಬೇಕು ಎಂದು ಅವರು ಕರೆನೀಡಿದರು.

ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆಧುನಿಕರಣ ಮತ್ತು ಸಹಕಾರಿ ಕಾಯ್ದೆಗಳ ಬಗ್ಗೆ ಸಹಕಾರ ಭಾರತಿ ರಾಜ್ಯ ಕಾನೂನು ಪ್ರಕೋಷ್ಠದ ಮಂಜುನಾಥ್ ಎಸ್. ಕೆ ಮಾತನಾಡಿದರು.
ಸಹಕಾರ ರಂಗದ ಉದ್ದೇಶ ಹಾಗೂ ಸಹಕಾರ ಭಾರತೀಯ ಉದ್ದೇಶದ ಬಗ್ಗೆ ಸಹಕಾರ ಭಾರತೀಯ ವಿಭಾಗ ಸಂಘಟನಾ ಪ್ರಮುಖ ಮೋಹನ್ ಕುಂಬ್ಳೆಕರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಸಹಕಾರಿ ಹದ್ದೂರು ರಾಜೀವ ಶೆಟ್ಟಿ ಹಾಗೂ ಯಶವಂತ ಬಿ. ಕೆ ಅವರ ಬಗ್ಗೆ ಸಹಕಾರ ಭಾರತಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ ಶೆಟ್ಟಿ ಮತ್ತು ಬಾಲಕೃಷ್ಣ ಮುದ್ದೋಡಿ ಮಾತನಾಡಿ ಸಂತಾಪ ಸೂಚಿಸಿದರು.

ಸಹಕಾರ ಭಾರತಿಯ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಇತರ ಎಲ್ಲಾ ಸಹಕಾರಿಯ ಅಧ್ಯಕ್ಷರು ಹಾಗೂ ಸಿಇಒ, ನಿರ್ದೇಶಕರು ಉಪಸ್ಥಿತರಿದ್ದರು. ಸಹಕಾರ ಭಾರತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುಸೂದನ್ ನಾಯಕ್ ಸ್ವಾಗತಿಸಿದರು. ಸಾಣೂರು ನರಸಿಂಹ ಕಾಮತ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.