ಹುಬ್ಬಳ್ಳಿ: ಮತಾಂತರ ನಿಷೇಧ ಕಾಯ್ದೆಯನ್ನು ಅಧಿವೇಶನದಲ್ಲಿ ಮಂಡಿಸುತ್ತೇವೆ. ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ, ಮಾರಕ. ಕ್ರೈಸ್ತ, ಮುಸ್ಲಿಂ, ಬೌದ್ಧ, ಸಿಖ್ ಧರ್ಮದವರಿಗೆ ಈ ಬಗ್ಗೆ ಆತಂಕ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೈಸ್ತ, ಮುಸಲ್ಮಾನ, ಸಿಖ್, ಬೌಧ್ಧ, ಹಿಂದೂ ಹೀಗೆ ಈ ಎಲ್ಲಾ ಧರ್ಮಗಳು ಸಂವಿಧಾನಾತ್ಮಕವಾಗಿ ಗುರುತು ಪಡೆದಿರುವ ಧರ್ಮಗಳು. ಅವುಗಳಿಗೆ, ಆ ಜನಾಂಗದವರಿಗೆ ಯಾವುದೇ ಆತಂಕ ಬೇಡ, ಅವರ ಪ್ರಾರ್ಥನೆ, ಅವರ ಧರ್ಮ, ನಂಬಿಕೆಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಆದರೆ ಬಡತನ, ಜನರ ಕಷ್ಟದ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ಆಸೆ, ಆಮಿಷಗಳನ್ನೊಡ್ಡಿ ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಈ ಚರ್ಚೆಯ ಸ್ವರೂಪದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಕಾನೂನು ಜಾರಿಗೆ ಬಂದಿದೆ ಎಂದರು.
ಎಲ್ಲವನ್ನೂ ಅವಲೋಕನ ಮಾಡಿ ಕರ್ನಾಟಕದಲ್ಲಿ ಕೂಡ ಕಾನೂನು ತರಬೇಕೆಂದು ಬಹುಜನರ ಅಪೇಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯ ಪರಿಶೀಲನಾ ಸಮಿತಿ ಪರಿಶೀಲನೆ ಮಾಡಿ ಸಂಪುಟಕ್ಕೆ ತರಲಾಗುತ್ತದೆ. ಬೆಳಗಾವಿಯಲ್ಲಿ ಸಂಪುಟ ಸಭೆ ನಡೆಸಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಮುಂದಾಗುತ್ತೇವೆ ಎಂದರು.















