ಆಂಧ್ರಪ್ರದೇಶದಲ್ಲಿ ಹಿಂದೂ ದೇಗುಲಗಳ ಮೇಲೆ ದಾಳಿ: ಪೇಜಾವರ ಶ್ರೀಗಳಿಂದ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ

ಉಡುಪಿ: ಆಂಧ್ರಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಈಚೆಗೆ ಸಾವಿರಾರು ಹಿಂದೂ ದೇವಾಲಯಗಳ ಮೇಲೆ ಕಿಡಿಗೇಡಿಗಳಿಂದ ದಾಳಿ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಆಂಧ್ರಪ್ರದೇಶದಲ್ಲಿ ಕಳೆದ ಒಂದು ವರ್ಷಗಳಿಂದ ದೇಗುಲದ ವಿಗ್ರಹ ಧ್ವಂಸಗೊಳಿಸುವುದು, ಅರ್ಚಕರಿಗೆ ಹಲ್ಲೆ ನಡೆಸುವುದು, ದೇಗುಲಗಳ ರಥಗಳನ್ನು ಸುಟ್ಟು ಹಾಕುವುದು, ದೇಗುಲದ ಸಂಪತ್ತು ದರೋಡೆ ಮಾಡುವುದು ಹಾಗೂ ದೇವಾಲಯಗಳಲ್ಲಿ ಅನಾಚರ ಮಾಡುವ ಕೃತ್ಯಗಳು ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ದೇಗುಲಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಹಿಂದೂ ಸಮಾಜ ಶಾಂತ ಸ್ವಭಾವದ ಸಮಾಜ. ಯಾರನ್ನು ರೊಚ್ಚಿಗೇಳೆಸುವ ಸ್ವಭಾವವನ್ನು ಹೊಂದಿಲ್ಲ. ಇದನ್ನೇ ಬಳಸಿಕೊಂಡು ಹಿಂದೂ ಸಮಾಜದ ಮೇಲೆ ದಾಳಿ ನಡೆಸುವುದು ಸರಿಯಲ್ಲ. ಹಿಂದೂಗಳ ತಾಳ್ಮೆ ಪರೀಕ್ಷಿಸುವವ ಕೆಲಸ ಯಾರು ಮಾಡಬಾರದು. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕೆಲಸ ಯಾರು ಮಾಡಬಾರದು ಎಂದು ಎಚ್ಚರಿಕೆ ನೀಡಿದರು‌.

ವಿಜಯನಗರ ಜಿಲ್ಲೆಯ ಶ್ರೀರಾಮಕ್ಷೇತ್ರಮ್ ನ ರಾಮಮಂದಿರದ ವಿಗ್ರಹ ಧ್ವಂಸ‌ ಪ್ರಕರಣವನ್ನು ಆಂಧ್ರ ಸರ್ಕಾರ ಗಂಭೀರವಾಗಿ‌ ಪರಿಗಣಿಸಬೇಕು. ಆದಷ್ಟು ಬೇಗ ವಿಗ್ರಹ ವಿರೂಪಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳನ್ನು ಶ್ರೀಗಳು ಒತ್ತಾಯಿಸಿದರು.