ಉಡುಪಿ: ಕಳೆದ ಮೂರು ವರ್ಷಗಳ ಹಿಂದೆ ಮಣಿಪಾಲದ ಪೆರಂಪಳ್ಳಿ ಎಂಬಲ್ಲಿ ನಡೆದ ಅಪ್ರಾಪ್ತ ಬುದ್ಧಿಮಾಂದ್ಯ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ ಆರೋಪಿ ಪೆರಂಪಳ್ಳಿ ನಿವಾಸಿ ಅರುಣ್ ಆಚಾರಿ(32) ಎಂಬಾತನನ್ನು ದೋಷಿ ಎಂದು ಬುಧವಾರ ತೀರ್ಪು ನೀಡಿದ್ದು, ಶಿಕ್ಷೆಯ
ಪ್ರಮಾಣವನ್ನು ಏಪ್ರಿಲ್ 12ರಂದು ಪ್ರಕಟಿಸಲಿದೆ.
ಆರೋಪಿ ಅರುಣ್ 2016ರ ಜುಲೈ 16ರಂದು ಬೆಳಿಗ್ಗೆ 9ಗಂಟೆ ಸುಮಾರಿಗೆ ಬಾಲಕಿ ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಆಕೆಗೆ ಮದುವೆಯಾಗುತ್ತೇನೆಂದು ಆಸೆ ತೋರಿಸಿ ತನ್ನ ಬೈಕಿನಲ್ಲಿ ಕೂರಿಸಿಕೊಂಡು ಮಣಿಪಾಲದ ಎರಡು ಲಾಡ್ಜ್ಗಳಿಗೆ ಹೋಗುತ್ತಾನೆ. ಆದರೆ ಲಾಡ್ಜ್ನ ಸಿಬ್ಬಂದಿ ಆರೋಪಿಯ ಮೇಲೆ ಅನುಮಾನಗೊಂಡು ರೂಮ್ ನೀಡಲು ನಿರಾಕರಿಸುತ್ತಾರೆ. ಬಳಿಕ ಬಾಲಕಿಯನ್ನು ಪೆರಂಪಳ್ಳಿಯಲ್ಲಿ ಇರುವ ತನ್ನ ಮನೆಗೆ ಕರೆದುಕೊಂಡು ಬಂದು ಬಾಲಕಿಯ ಮೇಲೆ ಬಲತ್ಕಾರವಾಗಿ ಘೋರ ಲೈಂಗಿಕ ಹಲ್ಲೆ ನಡೆಸುತ್ತಾನೆ.
ಈ ಬಗ್ಗೆ ತಿಳಿದ ಬಾಲಕಿಯ ತಂದೆ ಅದೇ ದಿನ ಮಣಿಪಾಲದ ಪೊಲೀಸ್ ಠಾಣೆಯಲ್ಲಿ ಆರೋಪಿಯ ಮೇಲೆ ದೂರು ನೀಡಿದ್ದಾರೆ. ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡ ಮಣಿಪಾಲ ಠಾಣೆಯ ಪೊಲೀಸರು 2016ರ ಜುಲೈ 16ರಂದು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಅಂದಿನ ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಎ. ಸಂಪತ್ ಕುಮಾರ್ 2016ರ ಸೆಪ್ಟೆಂಬರ್ 12ರಂದು ಜಿಲ್ಲಾ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಸಲ್ಲಿಸಿದ್ದಾರೆ.
ವಿಚಾರಣಾವಧಿಯಲ್ಲಿ ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು. ಆದರೆ ಪ್ರಕರಣದ ಗಂಭೀರತೆಯನ್ನು ಅರಿತ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. 35 ಸಾಕ್ಷಿಗಳ ಪೈಕಿ 30 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಸಿ.ಎಂ. ಜೋಷಿ ಆರೋಪಿ ದೋಷಿಯೆಂದು ಅಭಿಪ್ರಾಯಪಟ್ಟು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣದ ಬಗ್ಗೆ ವಾದ ವಿವಾದವನ್ನು ಆಲಿಸಿದ್ದಾರೆ. ಈ ವೇಳೆ ಸರ್ಕಾರದ ಪರವಾಗಿ ಜಿಲ್ಲಾ ವಿಶೇಷ ಸರ್ಕಾರಿ ಅಭಿಯೋಜಕ ವಿಜಯವಾಸು ಪೂಜಾರಿ ವಾದ ಮಂಡಿಸಿದ್ದು, ಆರೋಪಿಗೆ ಕಠಿಣ ಪ್ರಮಾಣದ ಶಿಕ್ಷೆ ನೀಡಬೇಕೆಂದು ವಾದ ನಡೆಸಿದ್ದಾರೆ.












