ಸವಾರಿ ನಿಲ್ಲಿಸಿದ ಅಟ್ಲಾಸ್ ಸೈಕಲ್: ವಿಶ್ವ ಸೈಕಲ್ ದಿನದಂದೇ ಹೆಮ್ಮೆಯ ಸೈಕಲ್ ಕಂಪೆನಿಗೆ ಬೀಗ!

ಹೊಸದಿಲ್ಲಿ: ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ದೇಶದ ಹೆಮ್ಮೆಯ ಅಟ್ಲಾಸ್ ಸಂಸ್ಥೆ, ತನ್ನ ಸೈಕಲ್ ತಯಾರಿಕಾ ಕೊನೆಯ ಘಟಕಕ್ಕೂ ವಿಶ್ವ ಸೈಕಲ್ ದಿನ ಜೂ. 3ರಂದೇ ಬೀಗ ಜಡಿದಿದೆ.

ಉತ್ತರ ಪ್ರದೇಶದ ಸಾಹಿಬಾದಾದ್‌ನಲ್ಲಿದ್ದ ತಮ್ಮ ಕೊನೆಯ ಘಟಕಕ್ಕೂ ಬೀಗ ಜಡಿದಿದ್ದು, ಆ ಮೂಲಕ ದೇಶದ 70 ವರ್ಷಗಳ ಹಿಂದಿನ ಹೆಮ್ಮೆಯ ಕಂಪನಿಯೊಂದು ಇತಿಹಾಸದ ಪುಟ ಸೇರಿದೆ.
1951ನೇ ಇಸವಿಯಲ್ಲಿ ಹರ್ಯಾಣದ ಸೋನೆಪತ್ ನಲ್ಲಿ‌ ಮೊದಲ ಘಟಕ ಪ್ರಾರಂಭವಾಗಿತ್ತು.

ಆ ಬಳಿಕ ದೇಶದಲ್ಲಿ ಬೆಳೆದು ಬಂದ ರೀತಿ ಅಚ್ಚರಿ ಹುಟ್ಟಿಸಿತ್ತು. ಅಟ್ಲಾಸ್’ ಎಂಬ ಪದ ಬಂದಾಗ ಮೊದಲು ನೆನಪಿಗೆ ಬರುವುದು ‘ಅಟ್ಲಾಸ್ ಸೈಕಲ್’. ಅಷ್ಟರಮಟ್ಟಿಗೆ ಜನಪ್ರಿಯವಾಗಿತ್ತು. 1982ರಲ್ಲಿ ನಡೆದ ಏಷ್ಯನ್ ಗೇಮ್ಸ್‌ಗೂ ಇಲ್ಲಿಂದಲೇ ಸೈಕಲ್ ವಿತರಿಸಿರುವುದು ಮತ್ತೊಂದು ಹೆಮ್ಮೆಯ ಸಂಗತಿ.

ಸಂಸ್ಥೆ ಮುಚ್ಚಿದ ಪರಿಣಾಮ 431 ಮಂದಿ ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೆ ಘಟಕ ಮುಚ್ಚುವ ಬಗ್ಗೆ ಯಾವುದೇ ಮುನ್ಸೂಚನೆಯಿರಲಿಲ್ಲ ಎಂದಿದ್ದಾರೆ.

 

ಲಾಕ್‌ಡೌನಿಂದಾಗಿ ಸುದೀರ್ಘ ದಿನಗಳ ಬಳಿಕ ನೌಕರರು ಕೆಲಸಕ್ಕೆ ಹಿಂತಿರುಗಿದಾಗ ಘಟಕದಲ್ಲಿ ಆರ್ಥಿಕ ನಷ್ಟದ ಕಾರಣ ಕಂಪನಿ ಮುಚ್ಚುಗಡೆಗೊಳಿಸಲಾಗಿದೆ ಎಂಬ ನೋಟಿಸ್ ಹಚ್ಚಲಾಗಿತ್ತು ಎನ್ನಲಾಗಿದೆ. ಕಂಪನಿ ಮುಚ್ಚಿದ ಹಿನ್ನೆಲೆ ಅನೇಕ ಸೆಲೆಬ್ರಟಿಗಳೂ ಬಾಲ್ಯದಲ್ಲಿ ತಾವು ಅಟ್ಲಾಸ್ ಸೈಕಲ್ ಸವಾರಿ ಮಾಡಿರುವುದನ್ನು ನೆನಪಿಸಿಕೊಂಡಿದ್ದಾರೆ.

ತಾತ್ಕಾಲಿಕ ಬೀಗ?

ಘಟಕ ಮುಚ್ಚಿರುವ ಕುರಿತು ಹೇಳಿಕೆ ನೀಡಿರುವ ಸಂಸ್ಥೆಯ ಸಿಇಒ ಪಿ ಸಿಂಗ್ ರಾಣಾ ಹೇಳಿಕೆ ನೀಡಿದ್ದು, ಮುಚ್ಚುಗಡೆ ತಾತ್ಕಾಲಿಕ ಎಂದಿದ್ದಾರೆ. ಹೆಚ್ಚುವರಿ ಭೂಮಿಯನ್ನು ಮಾರಾಟ ಮಾಡಿ 50 ಕೋಟಿ ರೂ.ಗಳ ನಿಧಿ ಸಂಗ್ರಹಿಸಿದ ಬಳಿಕ ಘಟಕವನ್ನು ತೆರೆಯಲಿದೆ ಎಂದು ಭರವಸೆ ನೀಡಿದ್ದಾರೆ.