ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿಗೆ ₹100 ಮುಖಬೆಲೆಯ ನಾಣ್ಯ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ವಿಶೇಷ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಡಿ.24ರಂದು ಬಿಡುಗಡೆ ಮಾಡಲಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ, ಸಂಸತ್ತಿನಲ್ಲಿ ಶೀಘ್ರ ವಾಜಪೇಯಿ ಅವರ ಪ್ರತಿಮೆ ಸ್ಥಾಪಿಸಲು ಸಂಸದೀಯ ಸಮಿತಿ ಒಪ್ಪಿಕೊಂಡಿದೆ. ₹100 ಮೌಲ್ಯದ ಈ ನಾಣ್ಯವು 35 ಗ್ರಾಂ ತೂಕವಿರುತ್ತದೆ.

ನಾಣ್ಯದ ಒಂದು ಬದಿಯಲ್ಲಿ ವಾಜಪೇಯಿ ಅವರ ಭಾವಚಿತ್ರವಿದ್ದು ದೇವನಾಗರಿ ಲಿಪಿಯಲ್ಲಿ ಅವರ ಹೆಸರಿರುತ್ತದೆ. ಭಾವಚಿತ್ರದ ಕೆಳಗೆ ಜನನ–ಮರಣದ ಇಸವಿ ಇರಲಿದೆ ಹಾಗೂ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ವಾಜಪೇಯಿ ಅವರ ಪುತ್ಥಳಿ ಅನಾವರಣಗೊಳಿಸಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ‘ಎನ್‌ಡಿಟಿವಿ’ ವರದಿ ಮಾಡಿದೆ.

ವಾಜಪೇಯಿ ಅವರು ದೆಹಲಿಯ ಏಮ್ಸ್‌ನಲ್ಲಿ ಆಗಸ್ಟ್ 16ರಂದು ನಿಧನರಾದರು. 1998ರಿಂದ 2004ರವರೆಗೆ ಎನ್‌ಡಿಎ ನೇತೃತ್ವದ ಒಕ್ಕೂಟ ಮುನ್ನಡೆಸಿದ್ದ ಅವರು, ಸುವರ್ಣ ಚತುರ್ಭುಜ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ವಾಜಪೇಯಿ ಅವರ ಜನ್ಮದಿನವಾದ ಡಿ.25 ರಂದು ಬಿಜೆಪಿ ‘ಉತ್ತಮ ಆಡಳಿತ ದಿನ’ವಾಗಿ ಆಚರಿಸುತ್ತದೆ.