ಪುಣೆ: ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಮತ್ತು ಕೆನಡಾದ ಮೆಕ್ಗಿಲ್ ವಿಶ್ವವಿದ್ಯಾಲಯ ಖಗೋಳಶಾಸ್ತ್ರ ವಿಜ್ಞಾನಿಗಳು ಬ್ರಹ್ಮಾಂಡದಲ್ಲಿ ಬಹುದೂರದ ನಕ್ಷತ್ರಪುಂಜದ ಪರಮಾಣು ಹೈಡ್ರೋಜನ್ನಿಂದ ಹುಟ್ಟಿಕೊಂಡಿರುವ ರೇಡಿಯೋ ಸಂಕೇತವನ್ನು ಪತ್ತೆ ಮಾಡಿದ್ದಾರೆ.
ಪುಣೆಯಲ್ಲಿನ ದೈತ್ಯ ಮೆಟ್ರೆವೇವ್ ರೇಡಿಯೊ ಟೆಲಿಸ್ಕೋಪ್ (GMRT) ಅನ್ನು ಉಪಯೋಗಿಸಿಕೊಂಡು ವಿಜ್ಞಾನಿಗಳು ಈ ಡೇಟಾವನ್ನು ಕಂಡುಹಿಡಿದಿದ್ದಾರೆ.
ಈ ಸಂಕೇತವು ಇದುವರೆಗೆ ಕಂಡುಹಿಡಿದ “ಅತ್ಯಂತ ದೂರದಿಂದ ಬಂದಿರುವ ಅತಿ ದೊಡ್ಡ ಸಂಕೇತ”ವಾಗಿದೆ ಎಂದು ಐಐಎಸ್ಸಿ ತಿಳಿಸಿದೆ.
ಸಂಶೋಧನೆಗಳನ್ನು ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಮಾಸಿಕ ನೋಟಿಸ್ ನಲ್ಲಿ ಪ್ರಕಟಿಸಲಾಗಿದೆ.
ಮೆಕ್ಗಿಲ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಮತ್ತು ಟ್ರಾಟಿಯರ್ ಸ್ಪೇಸ್ ಇನ್ಸ್ಟಿಟ್ಯೂಟ್ನ ಪೋಸ್ಟ್ಡಾಕ್ಟರಲ್ ಸಂಶೋಧಕ ಅರ್ನಾಬ್ ಚಕ್ರವರ್ತಿ ಮತ್ತು ಐಐಎಸ್ಸಿಯ ಭೌತಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ನಿರುಪಮ್ ರಾಯ್, ರೆಡ್ಶಿಫ್ಟ್ ಝೆಡ್ =1.29 ನಕ್ಷತ್ರಪುಂಜದಲ್ಲಿನ ಪರಮಾಣು ಹೈಡ್ರೋಜನ್ನಿಂದ ರೇಡಿಯೊ ಸಿಗ್ನಲ್ ಅನ್ನು ಪತ್ತೆಹಚ್ಚಲು ಜಿಎಂಆರ್ಟಿ ಇಂದ ಡೇಟಾವನ್ನು ಬಳಸಿದ್ದಾರೆ.
ಸಂಕೇತವನ್ನು ಪತ್ತೆ ಹಚ್ಚಿದ ಸಮಯ ಮತ್ತು ಮೂಲ ಹೊರಸೂಸುವಿಕೆಯ ನಡುವಿನ ಸಮಯ ಸುಮಾರು 4.1 ಶತಕೋಟಿ ವರ್ಷಗಳಾಗಿವೆ. ಬ್ರಹ್ಮಾಂಡವು ಕೇವಲ 4.9 ಶತಕೋಟಿ ವರ್ಷಗಳಷ್ಟು ಹಳೆಯದಾಗಿದ್ದಾಗ ಈ ಸಂಕೇತವನ್ನು ಹೊರಸೂಸಲಾಯಿತು ಎಂದು ಐಐಎಸ್ಸಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಅಂದರೆ 8.8 ಶತಕೋಟಿ ವರ್ಷಗಳ ಹಿನ್ನೋಟದ ಸಮಯದಲ್ಲಿ ಇದನ್ನು ಪತ್ತೆ ಹಚ್ಚಲಾಗಿದೆ. ಆಕಾಶದಲ್ಲಿ ನಾವು ಸಮಯದಲ್ಲಿ ಹಿಂದಕ್ಕೆ ಚಲಿಸುತ್ತಿರುತ್ತೇವೆ. ಒಂದು ಸಂಕೇತವು ಭೂಮಿಯನ್ನು ತಲುಪಲು ಶತಕೋಟಿ ವರ್ಷಗಳು ತಗಲುತ್ತವೆ. ಒಂದು ಸಂಕೇತವನ್ನು ನಾವು ಪತ್ತೆ ಹಚ್ಚಿದ ಸಮಯ ಮತ್ತು ಅದು ಹೊರಸೂಸಿರುವ ಮೂಲ ಸಮಯವನ್ನು ಖಗೋಲ ವಿಜ್ಞಾನದಲ್ಲಿ ಲುಕ್-ಬ್ಯಾಕ್ ಟೈಮ್ ಎನ್ನುತ್ತಾರೆ.
ಈ ಸಂಶೋಧನೆಗಳು ತಟಸ್ಥ ಅನಿಲದ ವಿಕಾಸದ ಅಧ್ಯಯನಗಳಿಂದ ಗ್ಯಾಲಕ್ಸಿಗಳ ವಿಕಾಸವನ್ನು ಅರ್ಥಮಾಡಿಕೊಳ್ಳುವಲ್ಲಿ ನಿರ್ಣಾಯಕವಾಗಿವೆ.
ಪುಣೆಯ ನ್ಯಾಷನಲ್ ಸೆಂಟರ್ ಫಾರ್ ರೇಡಿಯೋ ಆಸ್ಟ್ರೋಫಿಸಿಕ್ಸ್ – ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯು ಜಿಎಂಆರ್ಟಿ ಅನ್ನು ನಿರ್ವಹಿಸುತ್ತದೆ. ಸಂಶೋಧನೆಗೆ ಮೆಕ್ಗಿಲ್ ಮತ್ತು ಐಐಎಸ್ಸಿ ಧನಸಹಾಯ ಮಾಡುತ್ತವೆ.