ಜ. 26ರಿಂದ 31ರ ವರೆಗೆ ಹೊಟೇಲ್ ಕಿದಿಯೂರು ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ

ಉಡುಪಿ: ಇಲ್ಲಿನ ಪ್ರತಿಷ್ಠಿತ “ಕಿದಿಯೂರ್ ಹೊಟೇಲ್ಸ್‌” (Hotel Kidiyur) ಇದರ ಆವರಣದಲ್ಲಿರುವ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಜ. 26ರಿಂದ 31ರ ವರೆಗೆ ಅಷ್ಟಪವಿತ್ರ ನಾಗಮಂಡಲೋತ್ಸವ (Nagamandala) ನಡೆಯಲಿದೆ.

ಜ. 26 ಬೆಳಗ್ಗೆ 6 ರಿಂದ ಜ. 30ರ ಬೆಳಗ್ಗೆ 7 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜ.29 ಬೆಳಗ್ಗೆ 7.30 ರಿಂದ ಮಹಾ ರುದ್ರಯಾಗ, ರಾತ್ರಿ 8 ರಿಂದ ವಾರಾಣಸಿಯಿಂದ ಆಗಮಿಸಿರುವ ಅರ್ಚಕ ವೃಂದದವರಿಂದ ಸಾಮೂಹಿಕ ಗಂಗಾರತಿ ಜರಗಲಿದೆ.

ಜ.31ರ ಬೆಳಗ್ಗೆ 9.45ಕ್ಕೆ ಅಷ್ಟೋತ್ತರ ಶತಕಲಶಾಭಿಷೇಕ, 10 ರಿಂದ ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ನಾಗದೇವರ ದರ್ಶನ, ಕಾಶೀ ವಾರಾಣಸಿಯಿಂದ ತರಿಸಲಾದ ಪವಿತ್ರ ಗಂಗಾಜಲ ಭಕ್ತರಿಗೆ ಸಂಪ್ರೋಕ್ಷಣೆ, ದಾರ ವಿತರಣೆ, ಪಲ್ಲಪೂಜೆ, ಸಂಜೆ 4.30ರಿಂದ ಹಾಲಿಟ್ಟು ಸೇವೆ, 5.30 ರಿಂದ ಗಂಗಾರತಿ, 6.30ಕ್ಕೆ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

ಜ. 26 ರಿಂದ 30 ರ ತನಕ ಸಂಜೆ ಶ್ರೀವಿಶ್ವೇಶತೀರ್ಥ ವೇದಿಕೆಯಲ್ಲಿ ಧಾರ್ಮಿಕ ಸಭೆ ಡಾ. ಜಿ. ಶಂಕರ್ ಇವರ ಗೌರವಾಧ್ಯಕ್ಷತೆಯಲ್ಲಿ ನಡೆಯಲಿದೆ.

ಜ. 26ರಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರಿಂದ ಆಶೀರ್ವಚನ, ಜೋತಿಷಿ ಕಬಿಯಾಡಿ ಜಯರಾಮ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ ಜ. 27ರ ಸಂಜೆ 7ರಿಂದ ನಡೆಯುವ ಸಭೆಯಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರಿಂದ ಆಶೀರ್ವಚನ ಹಾಹೂ ಜ್ಯೋತಿಷಿ ವಿ. ಶ್ರೀನಿವಾಸ ಭಟ್ ಕುತ್ಪಾಡಿ ಅವರಿಂದ ಉಪನ್ಯಾಸ ನಡೆಯಲಿದೆ.

ಜ. 27ರ ಸಂಜೆ 4.30ರಿಂದ ನಾಗದೇವರಿಗೆ ನೂತನವಾಗಿ ನಿರ್ಮಿಸಿದ ರಜತ ಮಂಟಪ, ರಜತ ಕವಚ ಮತ್ತು ಸ್ವರ್ಣ ಲೇಪಿತ ಪ್ರಭಾವಳಿಯಲ್ಲಿ ರಜತ ಬಲಿ ಮೂರ್ತಿಯನ್ನು ಹಸುರುವಾಣಿ ಹೊರೆಕಾಣಿಕೆ ಸಹಿತ ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ತಂದು ಶ್ರೀ ನಾಗ ಸಾನ್ನಿಧ್ಯಕ್ಕೆ ಸಮರ್ಪಿಸಲಾಗುವುದು.

ಜ.28ರಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಂದ ಆಶೀರ್ವಚನ, ಶತವಧಾನಿ ಡಾ. ವಿ. ರಮಾನಾಥ ಆಚಾರ್ಯ ಅವರ ಪ್ರವಚನ, ಜ.29 ರಂದು ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಂದ ಆಶೀರ್ವಚನ, ವಾಸ್ತುತಜ್ಞ ವಿ. ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರಿಂದ ಉಪನ್ಯಾಸ, ಜ. 30ರಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಂದ ಆಶೀರ್ವಚನ, ಆಗಮ ಪಂಡಿತ ವಿ. ಪಂಜ ಭಾಸ್ಕರ್ ಭಟ್ ಅವರಿಂದ ಉಪನ್ಯಾಸ ನಡೆಯಲಿದೆ.

ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯಕ್ತ ಪ್ರತೀ ದಿನ ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ವೈಭವ ನಡೆಯಲಿದೆ. ಜ. 26 ರ ರಾತ್ರಿ 8 ರಿಂದ ನೃತ್ಯ-ಸಂಗೀತ ವೈಭವ, ಜ. 27ರ ರಾತ್ರಿ 9ರಿಂದ ಭಕ್ತಿ ಗಾನ ಸುಧೆ, ಜ.28ರ ರಾತ್ರಿ 8ರಿಂದ ವರಾಹ ರೂಪಂ, ವಾ ಪೊರ್ಲುಯಾ-ತುಳು, ಕನ್ನಡ, ದೇಶೀಯ ಜಾನಪದ ಸಂಗೀತ ಫ್ಯೂಷನ್, ಜ.29ರ ರಾತ್ರಿ 8.30 ರಿಂದ ಸಂಪೂರ್ಣ ಶ್ರೀಕೃಷ್ಣ ದರ್ಶನ-ನೃತ್ಯ ರೂಪಕ, ಜ. 30ರ ರಾತ್ರಿ 8.30ರಿಂದ “ಅಧ್ಯಕ್ಷೆರ್” ತುಳು ಹಾಸ್ಯ ನಾಟಕ, ಜ. 31ರ ಬೆಳಗ್ಗೆ 10.30ರಿಂದ ವಿಶ್ವೇಶತೀರ್ಥ ವೇದಿಕೆಯಲ್ಲಿ ಶತವೀಣಾವಾದನ ವಿಶೇಷ, ಮಧ್ಯಾಹ್ನ 12.30ರಿಂದ ಸ್ಯಾಕ್ಸೊಫೋನ್ ವಾದನ, 3ರಿಂದ ಭಕ್ತಿ ರಸಾಯನ, ವಾಸುಕೀ ಮಂಟಪದಲ್ಲಿ ಬೆಳಗ್ಗೆ 10.30ರಿಂದ ಭಕ್ತಿ-ಭಾವ-ಜಾನಪದ ಸಂಗೀತ, ಮಧ್ಯಾಹ್ನ 1ರಿಂದ ಭಕ್ತಿ ಗಾನಾಮೃತ ಜರಗಲಿದೆ ಎಂದು ಸೇವಾಕರ್ತ ಕಿದಿಯೂರ್ ಹೊಟೇಲ್ಸ್ ಪ್ರೈ.ಲಿ.ನ ಎಂ.ಡಿ ಭುವನೇಂದ್ರ ಕಿದಿಯೂರು ತಿಳಿಸಿದ್ದಾರೆ.