ಸುರತ್ಕಲ್: ಇಲ್ಲಿನ ಅಕ್ರಮ ಟೋಲ್ ಗೇಟ್ ಅನ್ನು ಇನ್ನೂ ತೆರವುಗೊಳಿಸದಿರುವುದನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳು ಅಕ್ಟೋಬರ್ 18ರಂದು ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಜಿಲ್ಲಾಡಳಿತದ ಪರವಾಗಿ ಪಣಂಬೂರು ಪೊಲೀಸ್ ಉಪ ಆಯುಕ್ತರ ಕಚೇರಿಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಮದನ್ ಮೋಹನ್, ಸುರತ್ಕಲ್ ಟೋಲ್ ಗೇಟ್ ತೆರವು ಪ್ರಕ್ರಿಯೆಯ ಆಡಳಿತಾತ್ಮಕ ಕೆಲಸಗಳು ನಡೆಯುತ್ತಿದ್ದು, ಶೀಘ್ರ ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಕೆಲವೇ ದಿನಗಳಲ್ಲಿ ತೆರವು ಪ್ರಕ್ರಿಯೆ ಪೂರ್ಣಗೊಳ್ಳಲಿರುವುದರಿಂದ ಹೋರಾಟ ಕೈ ಬಿಡಬೇಕೆಂದು ಹೋರಾಟ ಸಮಿತಿಯನ್ನು ಕೇಳಿಕೊಂಡರು.
ಈ ವೇಳೆ ಸಭೆಯಲ್ಲಿದ್ದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಕಳೆದ ಆರು ವರ್ಷಗಳಲ್ಲಿ ಈ ರೀತಿಯ ಟೋಲ್ ಗೇಟ್ ತೆರವಿನ ಹಲವು ಭರವಸೆಗಳನ್ನು ನೀಡಲಾಗಿದೆ. ಕಳೆದ ಆರು ತಿಂಗಳಿನಲ್ಲಿ ಸರಕಾರದ ವೇದಿಕೆ ಮತ್ತು ವಿಧಾನ ಸಭೆಯಲ್ಲೂ ತಿಂಗಳೊಳಗೆ ಟೋಲ್ ಗೇಟ್ ತೆರವು ಎಂಬ ಹೇಳಿಕೆಗಳು ಹೊರಬಿದ್ದಿವೆ. ಆದರೆ ಇದುವರೆಗೂ ಅವು ಯಾವುದೂ ಜಾರಿಗೆ ಬಂದಿಲ್ಲ. ಈಗಿನ ಭರವಸೆಯೂ ಜಾರಿಗೆ ಬರುತ್ತದೆ ಎಂಬ ವಿಶ್ವಾಸ ಜನತೆಗಿಲ್ಲ ಎಂದರು.
ದ.ಕ ಮತ್ತು ಉಡುಪಿ ಉಭಯ ಜಿಲ್ಲೆಗಳ ನೂರಾರು ಸಂಘಟನೆಗಳು ಅ.18ರ ಮುತ್ತಿಗೆ ತೀರ್ಮಾನವನ್ನು ಬೆಂಬಲಿಸಿವೆ. ಟೋಲ್ ಸಂಗ್ರಹ ಸ್ಥಗಿತಗೊಳ್ಳದೆ, ಭರವಸೆಯ ಆಧಾರದಲ್ಲಿ ಹೋರಾಟ ಮುಂದೂಡಲು ಅವರು ಸಮ್ಮತಿಸಲಾರರು. ಹೋರಾಟವನ್ನು ಒಕ್ಕೊರಲಿನಿಂದ ಬೆಂಬಲಿಸುತ್ತಿರುವ ಜನತೆ ಇದನ್ನು ಒಪ್ಪವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸರಕಾರದ ಹೇಳಿಕೆಯ ಪ್ರಕಾರ ಇನ್ನು ಕೆಲವೇ ದಿನದಲ್ಲಿ ಸುರತ್ಕಲ್ ಟೋಲ್ ಗೇಟ್ ತೆರವಿಗೆ ಬೇಕಾದ ಪ್ರಕ್ರಿಯೆ ಪೂರ್ಣಗೊಳ್ಳುವುದಾದಲ್ಲಿಅಲ್ಲಿವರೆಗೆ ಟೋಲ್ ಸಂಗ್ರಹವನ್ನು ನಡೆಸಕೂಡದು. ಸತತ ಏಳು ವರ್ಷಗಳಿಂದ ನೂರಾರು ಕೋಟಿ ರೂಪಾಯಿಗಳನ್ನು ಸುರತ್ಕಲ್ ಟೋಲ್ ಗೇಟ್ ನಿಂದ ಸಂಗ್ರಹಿಸಲಾಗಿದೆ. ಜನರ ಆಕ್ರೋಶ, ಆಗ್ರಹವನ್ನು ಪುರಸ್ಕರಿಸಿ ಟೋಲ್ ಸಂಗ್ರಹವನ್ನು ತಕ್ಷಣವೆ ಸ್ಥಗಿತಗೊಳಿಸಬೇಕು. ಅ.18ರ ಟೋಲ್ ಗೇಟ್ ಮುತ್ತಿಗೆ ಧರಣಿಯನ್ನು ಶಾಂತಿಯುತವಾಗಿ ನಡೆಸಲಿದ್ದು, ಟೋಲ್ ಸಂಗ್ರಹ ಸ್ಥಗಿತಗೊಂಡಿರುವುದು ಖಾತರಿಗೊಳ್ಳುವವರಗೆ ಮುತ್ತಿಗೆ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಎಸಿಪಿ ಮಹೇಶ್ ಕುಮಾರ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.