ವಿಧಾನಸಭಾ ಚುನಾವಣೆ: ಉಡುಪಿ ಜಿಲ್ಲೆಗೆ ಪ್ಯಾರಾ ಮಿಲಿಟರಿ ಪಡೆ ಆಗಮನ

ಡುಪಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಗೆ ಮಂಗಳವಾರ ತಡರಾತ್ರಿ ಸೆಂಟ್ರಲ್‌ ಪ್ಯಾರಾ ಮಿಲಿಟರಿ ಪಡೆ ಆಗಮನವಾಗಿದೆ.ಅಸ್ಸಾಂನಿಂದ 4 ಕಂಪೆನಿಯ 400 ಮಂದಿ ಆಗಮಿಸಿದ್ದಾರೆ. ಒಂದು ತಂಡದಲ್ಲಿ 100 ಮಂದಿ ಇರಲಿದ್ದು, ಆಗಮಿಸಿರುವ 3 ತಂಡದಲ್ಲಿ 300 ಮಂದಿ ಪುರುಷರಿದ್ದರೆ.ಮತ್ತೂಂದು ತಂಡದಲ್ಲಿ ಮಹಿಳಾ ಸಿಬಂದಿ ಇದ್ದಾರೆ.

ಚುನಾವಣೆ ನಿಮಿತ್ತ ರಾಜ್ಯಕ್ಕೆ 20 ಸಾವಿರ ಪ್ಯಾರಾ ಮಿಲಿಟರಿ ಸಿಬಂದಿ ಆವಶ್ಯಕತೆಯಿದ್ದು, ಮುಂದಿನ ಹಂತದಲ್ಲಿ ಇತರ ತಂಡಗಳು ಆಗಮಿಸಲಿವೆ. ಇವರನ್ನು ಕಾಪು, ಕಾರ್ಕಳ, ಉಡುಪಿ, ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಿಯೋಜಿಸಲಾಗುತ್ತದೆ. ಕುಂದಾಪುರ ಕ್ಷೇತ್ರಕ್ಕೆ ಮುಂದಿನ ಹಂತದಲ್ಲಿ ಆಗಮಿಸುವ ಸಿಬಂದಿ ನಿಯೋಜಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಜಿಲ್ಲೆಯ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ತಲಾ 4 ಮಂದಿ ಸಿಬಂದಿ ನಿಯೋಜಿಸಲಾಗುತ್ತದೆ. ಇಂತಹ ಪ್ರದೇಶಗಳ ಮೇಲೆ ಪೊಲೀಸ್‌ ಇಲಾಖೆ ಕಟ್ಟು ನಿಟ್ಟಿನ ಎಚ್ಚರ ವಹಿಸಿದ್ದು ಯಾವುದೇ ಅಹಿತಕರ ಘಟನೆ ನಡೆಯ ದಂತೆ ಸೂಕ್ತ ಮುನ್ನೆಚ್ಚರಿಕೆ ತೆಗೆದು ಕೊಳ್ಳಲಾಗುತ್ತಿದೆ.

ಬೈಂದೂರು ಕ್ಷೇತ್ರದ ಶಿರೂರು, ಕೊಲ್ಲೂರು, ಹೊಸಂಗಡಿ, ಕುಂದಾಪುರ ಕ್ಷೇತ್ರದ ಹಾಲಾಡಿ, ಕಂಡಲೂರು, ತೆಕ್ಕಟ್ಟೆ, ಉಡುಪಿ ಕ್ಷೇತ್ರದ ನೇಜಾರು, ಉದ್ಯಾವರ ಬಲೈಪಾದೆ, ಅಲೆವೂರು, ಕಾಪು ಕ್ಷೇತ್ರದ ಕಟಪಾಡಿ, ಹೆಜಮಾಡಿ, ಮೂಡುಬೆಳ್ಳೆ, ಅಂಜಾರು, ಕಾರ್ಕಳ ಕ್ಷೇತ್ರದ ನಡ್ಸಾಲು, ಸೋಮೇಶ್ವರ, ಸಾಣೂರು, ಮುರತ್ತಂಗಡಿ, ಈದು, ಹೊಸ್ಮಾರು, ಬೆಳ್ಮಣ್‌ಗಳಲ್ಲಿ ಚೆಕ್‌ಪೋಸ್ಟ್‌ ಮಾಡಲಾಗಿದೆ. ದಿನದ 24 ತಾಸು ಮೂರು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು ಮುಂದೆ ಪ್ಯಾರಾ ಮಿಲಿಟರಿ ಪಡೆಯ ಸಿಬಂದಿಗಳೂ ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಜಿಲ್ಲೆಯಲ್ಲಿ ಚೆಕ್‌ಪೋಸ್ಟ್‌ ಗಳಲ್ಲಿ ಪೊಲೀಸರು ತಪಾಸಣೆ ಕಾರ್ಯ ಮುಂದುವರಿಸಿದ್ದಾರೆ. ಅನುಮಾನಸ್ಪದವಾಗಿ ಕಂಡು ಬಂದವರ ವಾಹನಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.