ವಿಶ್ವದ ಅತಿ ಎತ್ತರದ ಮತದಾನ ಕೇಂದ್ರ ತಾಶಿಗ್ಯಾಂಗ್ ನಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಮತ ಚಲಾವಣೆ; ನ. 12 ರಿಂದ ಡಿ.5 ಎಕ್ಸಿಟ್ ಪೋಲ್ ಗೆ ನಿಷೇಧ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿರುವ ತಾಶಿಗ್ಯಾಂಗ್ 15256 ಅಡಿಗಳಷ್ಟು ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ಮತದಾನ ಕೇಂದ್ರವಾಗಿದೆ. ತಾಶಿಗ್ಯಾಂಗ್ ನಿವಾಸಿಗಳು ನಾಳೆ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದು ಎಐಆರ್ ವರದಿಗಾರರು ವರದಿ ಮಾಡಿದ್ದಾರೆ. ವಿಶ್ವದ ಅತಿ ಎತ್ತರದ ಮತದಾನ ಕೇಂದ್ರವಾದ ತಾಶಿಗ್ಯಾಂಗ್ ಅನ್ನು 2019 ರಲ್ಲಿ ಸ್ಥಾಪಿಸಲಾಯಿತು ಮತ್ತು ಮತದಾರರು ಲೋಕಸಭೆ ಚುನಾವಣೆ ಮತ್ತು ಲೋಕಸಭೆ ಉಪಚುನಾವಣೆಯಲ್ಲಿ ಎರಡು ತಮ್ಮ ಹಕ್ಕು ಚಲಾಯಿಸಿದ್ದಾರೆ. ಆದರೆ ಈ ಬಾರಿ ಮತದಾರರು ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

ಈ ವರ್ಷದ ಆರಂಭದಲ್ಲಿ, ಮಂಡಿ ಲೋಕಸಭಾ ಉಪಚುನಾವಣೆಯಲ್ಲಿ, ಈ ಮತಗಟ್ಟೆಯು ಶೇಕಡಾ 100 ರಷ್ಟು ಮತದಾನಕ್ಕೆ ಸಾಕ್ಷಿಯಾಗಿತ್ತು. ಮೈನಸ್ 16 ಡಿಗ್ರಿ ತಾಪಮಾನವಿದ್ದರೂ ಮತದಾರರು ಉತ್ಸಾಹದಿಂದ ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರು. ತಾಶಿಗ್ಯಾಂಗ್ ಗ್ರಾಮದಲ್ಲಿ 30 ಪುರುಷರು ಮತ್ತು 22 ಮಹಿಳೆಯರು ಸೇರಿದಂತೆ 52 ನೋಂದಾಯಿತ ಮತದಾರರಿದ್ದಾರೆ. ಈ ದೂರದ ಗ್ರಾಮವು ಮಂಡಿ ಸಂಸದೀಯ ಕ್ಷೇತ್ರದ ಅಡಿಯಲ್ಲಿ ಬರುವ ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿದೆ.

ಎಕ್ಸಿಟ್ ಪೋಲ್ ಗೆ ನಿಷೇಧ

ಈ ಮಧ್ಯೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಈ ತಿಂಗಳ 12 ರಿಂದ ಮುಂದಿನ ತಿಂಗಳ 5 ರವರೆಗೆ ಯಾವುದೇ ಎಕ್ಸಿಟ್ ಪೋಲ್ ನಡೆಸುವುದನ್ನು ಮತ್ತು ಎಕ್ಸಿಟ್ ಪೋಲ್ ಫಲಿತಾಂಶವನ್ನು ಪ್ರಕಟಿಸುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ. ನವೆಂಬರ್ 12 ರಂದು ಬೆಳಿಗ್ಗೆ 8 ರಿಂದ ಡಿಸೆಂಬರ್ 5 ರಂದು ಸಂಜೆ 5.30 ರ ನಡುವಿನ ಅವಧಿಯಲ್ಲಿ ಯಾವುದೇ ಎಕ್ಸಿಟ್ ಪೋಲ್ ನಡೆಸುವುದು ಮತ್ತು ಫಲಿತಾಂಶಗಳನ್ನು ಪ್ರಕಟಿಸುವುದನ್ನು ನಿಷೇಧಿಸಲಾಗಿದೆ ಎಂದು ಆಯೋಗವು ಸೂಚಿಸಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.