ಉಡುಪಿ: ಮೀಸಲಾತಿ ಕೇಳುವುದು ತಪ್ಪಲ್ಲ. ಸಂವಿಧಾನದಡಿಯಲ್ಲಿ ಯಾರು ಮೀಸಲಾತಿ ಪಡೆಯಲು ಅರ್ಹರಿದ್ದಾರೆಯೋ, ಅವರಿಗೆಲ್ಲ ಮೀಸಲಾತಿ ಕೊಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪಡುಬಿದ್ರಿ ಪೇಟೆಯಲ್ಲಿ ಸೋಮವಾರ ಆಯೋಜಿಸಿದ್ದ ‘ಜನಧ್ವನಿ ಪಾದಯಾತ್ರೆ’ಯ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮೀಸಲಾತಿ ಕೊಡುವ ಬಗ್ಗೆ ಪರಿಶೀಲನೆ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಯಾರು ಹಿಂದುಳಿದ ವರ್ಗಕ್ಕೆ ಸೇರಬೇಕು. ಯಾರು ಸೇರಬಾರದು ಎಂಬುವುದನ್ನು ಪರಿಶೀಲಿಸಿ ಶಿಫಾರಸ್ಸು ಮಾಡಬೇಕು ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೀಸಲಾತಿ ಕೊಡಬೇಕೆಂದು ಕೇಳುವುದನ್ನು ಬ್ಲ್ಯಾಕ್ ಮೇಲ್ ಎಂದು ಹೇಳಲು ಆಗದು. ಸಂವಿಧಾನದಡಿ ಮೀಸಲಾತಿ ಕೇಳಲು ಎಲ್ಲರಿಗೂ ಹಕ್ಕಿದೆ. ಅದನ್ನು ಕೊಡಬೇಕೋ, ಬೇಡವೋ ಎಂದು ಸರ್ಕಾರ ಸಂವಿಧಾನದಡಿಯಲ್ಲಿ ತೀರ್ಮಾನಿಸಲಿ ಎಂದು ಹೇಳಿದರು.
ನಾನು ಯಾರಿಂದಲೂ ಐದು ಪೈಸೆ ತೆಗೆದುಕೊಂಡಿಲ್ಲ:
ಐಎಂಎ ಹಗರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಐಎಂಎ ಹಗರಣಕ್ಕೂ ನನಗೂ ಸಂಬಂಧವಿಲ್ಲ. ನಾನು ಯಾರಿಂದಲೂ ಐದು ಪೈಸೆ ತೆಗೆದುಕೊಂಡಿಲ್ಲ. ಯಾರದ್ದೋ ಕೈಯಲ್ಲಿ ಹಣ ಕೊಟ್ಟು ನನ್ನನ್ನು ಕೇಳಿದ್ರೆ ಏನು ಪ್ರಯೋಜನ. ಯಾರು ತೆಗೆದುಕೊಂಡಿದ್ದಾರೋ, ಅವರಲ್ಲಿ ವಸೂಲಿ ಮಾಡಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ನಾನು ಅಯೋಧ್ಯೆಯ ಬದಲು ನಮ್ಮೂರಿನಲ್ಲಿ ಕಟ್ಟುವ ರಾಮಮಂದಿರಕ್ಕೆ ದೇಣಿಗೆ ನೀಡುತ್ತೇನೆ ಎಂದಿದ್ದೆ. ಅದರಲ್ಲಿ ಏನು ವಿವಾದ ಇದೆ. ನಮ್ಮೂರಿನಲ್ಲಿ ಕಟ್ಟುವುದು ರಾಮಮಂದಿರ ಅಲ್ವಾ?. ಅದಕ್ಕೆ ದೇಣಿಗೆ ನೀಡುವುದು ತಪ್ಪಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯರ ದೇಶ ನಿಷ್ಠೆಯ ಬಗ್ಗೆ ಸಂದೇಹವಿದೆ ಎಂಬ ಪೇಜಾವರ ಶ್ರೀ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಬ್ಬರು ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿಲ್ಲ. ಆದ್ರೂ ದೇಶ ಭಕ್ತಿ ಬಗ್ಗೆ ಮಾತನಾಡುತ್ತಾರೆ. ನಾನು ಯಾವ ಸ್ವಾಮೀಜಿ ಬಗ್ಗೆ ಮಾತನಾಡಲ್ಲ. ಸಂವಿಧಾನದ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದು ಹೇಳಿದರು.