HomeTrendingಸಾವಯವ ಕೃಷಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸ್ತಾರೆ ಶಿರ್ಲಾಲಿನ ಈ ಪ್ರಗತಿಪರ ಕೃಷಿಕ: ಕೃಷಿ ಆಸಕ್ತರೇ...

ಸಾವಯವ ಕೃಷಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸ್ತಾರೆ ಶಿರ್ಲಾಲಿನ ಈ ಪ್ರಗತಿಪರ ಕೃಷಿಕ: ಕೃಷಿ ಆಸಕ್ತರೇ ಒಮ್ಮೆ ಇವರ ಕತೆ ಕೇಳಿ!

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೃಷಿಕ ಅಶ್ವಥ ನಾರಾಯಣರ ಕೃಷಿ ಸಾಧನೆ ಒಮ್ಮೆ ಕೇಳಿ. ಕೃಷಿ ಕ್ಷೇತ್ರದಲ್ಲಿ ಏನಾದರೂ ಸಾದನೆ ಮಾಡಬೇಕು ಎನ್ನುವವರಿಗೆ ಇದು ಗ್ಯಾರಂಟಿ ಒಂದು ಸ್ಪೂರ್ತಿ

ಬೆಳೆಗಳಿಗೆ ಬೆಲೆ ಇಲ್ಲ, ಮಾರುಕಟ್ಟೆ ಇಲ್ಲ ಎನ್ನುವ ನಾನಾ ಕಾರಣಗಳಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದು ಸಹಜ. ಆದರೆ ಬಾಲ್ಯದ ಕೃಷಿ ಒಲವಿನಿಂದ ತೋಟಗಾರಿಕೆ ಮಾಡುತ್ತ, ಮಣ್ಣಿನೊಂದಿಗೆ ಬೆರೆಯುತ್ತ ಬೆಳೆದ ಯಶಸ್ವಿ ಪ್ರಗತಿಪರ ಕೃಷಿಕರೊಬ್ಬರ ಯಶೋಗಾಥೆ ಇಲ್ಲಿದೆ.

ಇವರ ಹೆಸರು ಅಶ್ವಥ್ ನಾರಾಯಣ, ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಕೃಷಿಕರಿವರು. ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಹದಿನೆಂಟು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವ ಈ ರೈತನ ಸಾಹಸ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ ಎಂದರೆ ನೀವು ನಂಬಲೇಬೇಕು.

♦ಬದುಕು ಕೊಟ್ಟ ಮಲ್ಲಿಗೆಯ ಪರಿಮಳ:

ಕರಾವಳಿ ಭಾಗದಲ್ಲಿ ಮಲ್ಲಿಗೆ ಹೂವಿಗೆ ಭಾರೀ ಬೇಡಿಕೆ ಅನ್ನೋದು ನಿಮಗೆಲ್ಲಾ ಗೊತ್ತು. ಅದರ ಸಲುವಾಗಿ ಮಲ್ಲಿಗೆ ಗಿಡಗಳನ್ನು ನಾಟಿ ಮಾಡಿ ಹೂಗಳಿಂದ ನಿತ್ಯ ಒಂದುವರೆ ಸಾವಿರ ಆದಾಯ ಗಳಿಸುತ್ತಿದ್ದಾರೆ ನಾರಾಯಣರು. ಅದರ ಜೊತೆಗೆ ಮಲ್ಲಿಗೆ ಗಿಡಗಳನ್ನು ಪ್ಲಾಂಟೇಷನ್ ಮಾಡಿ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೈನುಗಾರಿಕೆ ಮಾಡುತ್ತ ನಿತ್ಯ ಇಪ್ಪತ್ತು ಲೀಟರ್ ಹಾಲನ್ನು ಡೈರಿಗೆ ನೀಡುತ್ತ ಹೈನುಗಾರಿಕೆಯಲ್ಲಿಯೂ ಮುನ್ನುಗ್ಗುತ್ತಿದ್ದಾರೆ.

ಇವರು ತಮ್ಮ ಕೃಷಿಯಲ್ಲಿ ರಾಸಾಯನಿಕ ರಹಿತ ಕೃಷಿ ಪದ್ಧತಿ ಅಳವಡಿಸಿದ್ದಾರೆ.ಇವರನ್ನು ನೋಡಿ ಇತರ ಕೃಷಿಕರು ಕೂಡ ಇದನ್ನು  ಅನುಸರಿಸುತ್ತಿದ್ದಾರೆ. ನಾರಾಯರಣ ಜೀವಚೈತನ್ಯ ಕೃಷಿಗೆ ಪೂರಕವಾಗಿದೆ. ಹೈನುಗಾರಿಕೆಯಲ್ಲಿ ದನಗಳನ್ನು ತೊಳೆದ ನೀರು ಸಗಣಿಯನ್ನು ಸ್ಲರಿ ಹೊಂಡವನ್ನು ನಿರ್ಮಿಸಿ ಪಂಪುಗಳ ಮೂಲಕ ಎಲ್ಲ ಗಿಡಗಳಿಗೆ ಸಿಂಪಡಣೆ ಮಾಡುತ್ತಿದ್ದಾರೆ.

♦ಋತು ಋತುವಿನಲ್ಲಿಯೂ ಸಮೃದ್ಧ ತರಕಾರಿ:

ನಾರಾಯಣರು ಸೂಕ್ತ ರೀತಿಯಲ್ಲಿ ಉತ್ತಮ ಗುಣಮಟ್ಟದ ಬೆಂಡೆ ಅಲಸಂಡೆ ಹರಿವೆಗಳ ಬೀಜಗಳನ್ನು ರೈತ ಸಂಪರ್ಕ ಕೇಂದ್ರದ ವಿಜ್ಞಾನಿಗಳ ಮೂಲಕ ಮಾಹಿತಿ ಪಡೆದು ಮಲ್ಚಿಂಗ್ ಕೃಷಿ ಯನ್ನಾಗಿ ಮಾಡಿಕೊಂಡು ಕಳೆ ರಹಿತ ಮೂಲಕ ಉತ್ತಮ ಇಳುವರಿ ಪಡೆಯುತಿದ್ದಾರೆ .
ತಮ್ಮ ಮೂರು ವರೆ ಎಕರೆಯಲ್ಲಿ ನೀರಾವರಿ ಗಾಗಿ ಕೃಷಿ ಹೊಂಡ, ಕೆರೆ ಬಾವಿ ಬೊರ್ವೆಲ್ ಗಳ ಮೂಲಕ ಸರ್ವಕಾಲಿಕ ನೀರಾವರಿ ವ್ಯವಸ್ಥೆ ಕಂಡುಕೊಂಡಿದ್ದಾರೆ.ಇವರು ತನ್ನ ಭೂಮಿಯ ಒಂದು ಇಂಚು ಜಾಗವನ್ನು ಖಾಲಿ ಬಿಟ್ಟವರಲ್ಲ. ಋತುಗಳಿಗನುಸಾರವಾಗಿ ತರಕಾರಿ ಬೆಳೆಯುವಲ್ಲಿ ಇವರು ನಿಪುಣರು. ಕೂಲಿಯಾಳುಗಳ ಸಮಸ್ಯೆ ಇವರಿಗೆ ಎದುರಾಗಿಲ್ಲ. ಇನ್ನು ಬರುವ ಲಾಭದಲ್ಲೂ ಕಡಿಮೆಯಾಗಿಲ್ಲ. ಇವರ ತಮ್ಮ ಮಕ್ಕಳು ಹೆಂಡತಿ ಅವರಿಗೆ ಪ್ರೋತ್ಸಾಹ ಕೂಡ ಇದೆ.

♦ಏನೇನಿದೆ ವಿಶೇಷ?

100 ತೆಂಗಿನ ಮರ, 1500 ಅಡಿಕೆ, 200 ಕರಿಮೆಣಸಿನ ಬಳ್ಳಿ, ಬಾಳೆ, ಒಂದು ಎಕರೆ ಭತ್ತ, ಜೊತೆಗೆ ಒಂದು ಎಕರೆ ತುಂಬಾ ದಿನನಿತ್ಯದ ಆದಾಯವನ್ನು ನೀಡಬಲ್ಲ ತರಕಾರಿಗಳಾ ಹಾಗಲಕಾಯಿ, ಕುಂಬಳ, ಹರಿವೆ, ಬೆಂಡೆ, ತೊಂಡೆ, ಸೋರೆ, ಅಲಸಂಡೆ, ಮುಳ್ಳುಸೌತೆ, ಬದನೆ, ಹೀರೆ, ಬಸಳೆ, ಚೀನಿಕಾಯಿ, ಹೀಗೆ ಇಪ್ಪತ್ತು ಬಗೆಯ ತರಕಾರಿ ಬೆಳೆಸುತ್ತಾರೆ. ಗೊಬ್ಬರಕ್ಕಾಗಿ ಐದು ದನಗಳಿವೆ, ಎರೆಹುಳಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರ, ಹೀಗೆ ಸಕಾಲವು ಒಂದೇ ಕಡೆ ಲಭ್ಯ ಲಿಂಬೆ, ಚಿಕ್ಕು,  ಕಾಳುಮೆಣಸು ವಿವಿಧ ರೀತಿಯ ಬೆಳೆಗಳು ಹಣ್ಣುಗಳನ್ನೂ ಬೆಳೆಯುತ್ತಾರೆ.

♦ರಾಸಾಯನಿಕ ಮುಕ್ತ ಕೃಷಿ:

ಅಧಿಕ ನೀರಿನ ಸಮಯದಲ್ಲಿ ಭತ್ತ ಬೆಳೆಸುತ್ತಾರೆ, ಉಳಿದ ಸಮಯದಲ್ಲಿ ನೀರಿನ ಲಭ್ಯತೆ ಕಡಿಮೆಯಿದ್ದಾಗ ಪರ್ಯಾಯ ಸಮಯದಲ್ಲಿ ಗದ್ದೆಯಲ್ಲಿ ಕುಂಬಳಕಾಯಿ ಬೆಂಡೆ, ಮಂಗಳೂರು ಸೌತೆಕಾಯಿ, ಬಸಳೆ , ಸೆಣಬುಕೃಷಿ ಬೆಳೆಸುತ್ತಾರೆ.. ಕ್ರಿಮಿನಾಶಕ ಬಳಕೆ ಮಾಡದೆ ಸಾವಯವ ಕಾಸರಕ ಬೆಳ್ಳುಳ್ಳಿ ಕಷಾಯವನ್ನು ಸಿಂಪಡಿಸುತ್ತಾರೆ.

ತಮ್ಮನ್ನು ಸಂಪೂರ್ಣವಾಗಿ ರಾಸಾಯನಿಕ ಮುಕ್ತ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ನಾರಾಯಣರು. ಸಾವಯವ ಕೃಷಿಗೆ ಒತ್ತುಕೊಡುತ್ತಿದ್ದಾರೆ. ತೊಟ್ಟಿಗಳ ನಿರ್ಮಾಣ ಮಾಡಿ ಎರೆಹುಳು ಗೊಬ್ಬರ ತಯಾರಿಸಿ ಗಿಡಗಳಿಗೆ ಎರೆಹುಳು ಗೊಬ್ಬರ ಮೂಲಕ ಪಾರಂಪರಿಕ ಕೃಷಿಯನ್ನೆ ಅಳವಡಿಸಿದ್ದಾರೆ ಇವರು.

ಇವರು ಬೆಳೆದ ಸಾವಯವ ತರಕಾರಿಗಳಿಗೂ ಸರ್ವ ಋತುಗಳಲ್ಲೂ ಬಹುಬೇಡಿಕೆಯಿದೆ. ತನ್ನೆಲ್ಲಾ ಕೆಲಸಗಳಿಗೆ ಇಲಾಖೆಗಳ ಮೂಲಕ ಸಬ್ಸಿಡಿಯ ರೂಪದಲ್ಲಿ ಯಂತ್ರಗಳನ್ನು ಖರಿದಿಸಿ ಉಪಯೋಗಿಸುತ್ತಿದ್ದಾರೆ ಟಿಲ್ಲರ್, ಸ್ಪ್ರೆಯರ್ , ಮೋಟೊಕಾರ್ಟ್ ನಂತಹ ಯಂತ್ರೋಪಕರಣಗಳನ್ನು ಇವರು ಬಳಸ್ತಾರೆ. ಅದಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬ್ರಹ್ಮಾವರ ಕೃಷಿ ವಿಜ್ಞಾನಕೇಂದ್ರ, ರೈತ ಸಂಪರ್ಕ ಕೇಂದ್ರಗಳ ಸಹಾಯವನ್ನು ಪಡೆದಿದ್ದಾರೆ. ಒಟ್ಟಾರೆ ಅಶ್ವಥ್ ನಾರಾಯಣರ ಕೃಷಿ ಬದುಕು ನಮಗೆಲ್ಲಾ ಮಾದರಿಯೇ ಸರಿ

♠ ರಾಮ್ ಅಜೆಕಾರು ಕಾರ್ಕಳ 
error: Content is protected !!