ಇಂದಿನಿಂದ ರಸ್ತೆಗಳಲ್ಲಿ ಓಡಾಡಲಿದೆ ಕ.ರಾ. ರ.ಸಾ.ಸಂಸ್ಥೆಯ ಅಶ್ವಮೇಧ ಕ್ಲಾಸಿಕ್ ಹೈ ಟೆಕ್ ಬಸ್ಸುಗಳು

ಬೆಂಗಳೂರು: ಇಂದಿನಿಂದ ರಾಜ್ಯದ ರಸ್ತೆಗಳಲ್ಲಿ ನೂತನ 100 ಅಶ್ವಮೇಧ ಕ್ಲಾಸಿಕ್ (Ashvamedha Classic) ಬಸ್‌ಗಳು ಕಾರ್ಯಾರಂಭ ಮಾಡಲಿದ್ದು, ಬೆಂಗಳೂರಿನ ವಿಧಾನಸೌಧ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಹೊಸ ಬಸ್‌ಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಅಶ್ವಮೇಧ ಬಸ್‌ಗಳು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.

ಒಟ್ಟು 800 ಬಸ್‌ಗಳ ಪೈಕಿ ಇಂದು 100 ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಮುಂದಿನ ಹಂತದಲ್ಲಿ ಇನ್ನುಳಿದ ಬಸ್‌ಗಳು ಸೇರ್ಪಡೆಗೊಳ್ಳಲಿವೆ. ಎಲ್ಲಾ ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸೋ ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್ ಬಸ್ ಇದಾಗಿದೆ.

ಈ ನೂತನ ಬಸ್‌ಗಳಿಗೆ ಅಶ್ವಮೇಧ ಕ್ಲಾಸಿಕ್ ಎಂದು ನಾಮಕರಣ ಮಾಡಲಾಗಿದ್ದು, ಪ್ರಯಾಣದ ಮರುಕಲ್ಪನೆ ಎಂಬ ಘೋಷ ವಾಕ್ಯವನ್ನು ನೀಡಲಾಗಿದೆ. ರಾಜಧಾನಿ ಬೆಂಗಳೂರು ಹಾಗೂ ಬಹುತೇಕ ಜಿಲ್ಲಾ ಕೇಂದ್ರಗಳ ನಡುವೆ ಈ ಬಸ್‌ಗಳು ಸಂಚಾರ ನಡೆಸಲಿವೆ.

ಈ ಬಸ್‌ಗಳು 52 ಆಸನಗಳನ್ನು ಒಳಗೊಂಡಿದ್ದು, ಮುಂಭಾಗ ಮತ್ತು ಹಿಂಭಾಗದ ಎಲ್‌ಇಡಿ ಡೆಸ್ಟಿನೇಶನ್ ಬೋರ್ಡ್‌ಗಳನ್ನು ಪಡೆದಿರುತ್ತವೆ. ಜೊತೆಗೆ ಇವು ಸೆನ್ಸರ್‌ ಚಾಲಿತ ನ್ಯೂಮ್ಯಾಟಿಕ್ ಬಾಗಿಲು, ಎಮರ್ಜೆನ್ಸಿ ಬಟನ್‌ ಹೊಂದಿದ್ದು ನಿಯತಕಾಲಿಕೆ, ನೀರಿನ ಬಾಟಲಿ ಇಡಲು ಪೌಚ್ ಅನ್ನು ಸಹ ಹೊಂದಿದೆ.

3.42 ಅಡಿ ಎತ್ತರ ಇರುವ ಈ ಬಸ್ಸುಗಳು ನಾನ್‌ ಎಸಿ ಸೌಕರ್ಯಗಳನ್ನು ಹೊಂದಿದ್ದು, ಇದರಲ್ಲಿ 12 ಪ್ಯಾನಿಕ್ ಬಟನ್‌ಗಳನ್ನ ಅಳವಡಿಸಲಾಗಿದೆ. ಜೊತೆಗೆ ಜಿಪಿಎಸ್, ಎರಡು ರೇರ್ ಕ್ಯಾಮರಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇನ್ನು, ಮೊಬೈಲ್ ಫೋನ್ ಚಾರ್ಜಿಂಗ್‌ಗೆ 6 ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, 52 ಬಕೆಟ್ ಸೀಟ್‌ಗಳನ್ನು ಇರಿಸಲಾಗಿದೆ. ಜೊತೆಗೆ ಹೊರಭಾಗದಲ್ಲಿ ಎಲ್‌ಇಡಿ ಮಾರ್ಗಫಲಕ ಹಾಕಲಾಗಿದ್ದು, ಪ್ರಯಾಣಿಕರ ಲಗೇಜ್ ಇರಿಸಲು ಸ್ಥಳಾವಕಾಶ ಇರಿಸಲಾಗಿದೆ.