ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ಔಷಧೀಯ ಸಸ್ಯ ಹಾಗೂ ಸೀಡ್ ಬಾಲ್ವಿತರಣೆ

ಮಣಿಪಾಲ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮುನಿಯಾಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸಸ್‌ನಲ್ಲಿ ಜೂನ್ 5 ರಂದು ಔಷಧೀಯ ಸಸ್ಯ ವಿತರಣೆ ಹಾಗೂ ಸೀಡ್ ಬಾಲ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಪ್ರಕೃತಿ ಪ್ರೇಮವನ್ನು
ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಡಾ. ಶುಭಾ, ಆಡಳಿತಾಧಿಕಾರಿ ಯೋಗೇಶ್ ಶೆಟ್ಟಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ರವಿಶಂಕರ ಶೆಣೈ, ಡಾ. ದಿನೇಶ್ ನಾಯಕ್ ಹಾಗೂ ದ್ರವ್ಯಗುಣ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಕಾಂತ್ ಉಪಸ್ಥಿತರಿದ್ದರು.

ಈ ವರ್ಷದ ಪರಿಸರ ದಿನಾಚರಣೆಯ “ಒಬ್ಬ ವಿದ್ಯಾರ್ಥಿಗೆ ಒಂದು ಗಿಡ” ಎಂಬ ಧ್ಯೇಯವಾಕ್ಯದ ಅನುಸಾರ 400 ಕ್ಕೂ ಅಧಿಕ ಸೀಡ್ ಬಾಲ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪರಿಸರ ಸಂರಕ್ಷಣೆ ಮತ್ತು ಜೀವ ವೈವಿಧ್ಯದ ಮಹತ್ವವನ್ನು ಅರಿವು ಮೂಡಿಸುವ ಸಲುವಾಗಿ ಔಷಧೀಯ ಸಸ್ಯಗಳನ್ನೂ ವಿತರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಕಾಲೇಜು ಆವರಣದಲ್ಲಿ ವಿವಿಧ ಔಷಧೀಯ ಹಾಗೂ ಇತರೆ ಸಸ್ಯಗಳನ್ನು ನೆಡಲಾಯಿತು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಪರಿಸರ ಸಂರಕ್ಷಣೆಯತ್ತ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.

ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು. ನೆಡಲಾದ ಗಿಡಗಳನ್ನು ಪೋಷಿಸಿ ಬೆಳೆಸುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.