ಅಬಕಾರಿ ಹಗರಣ ಪ್ರಕರಣ: ತಿಹಾರ್ ಜೈಲು ನಂ 2 ರಲ್ಲಿ ಅರವಿಂದ್ ಕೇಜ್ರಿವಾಲ್; ಏ.15 ರವರೆಗೆ ನ್ಯಾಯಾಂಗ ಬಂಧನ

ದೆಹಲಿ: ಅಬಕಾರಿ ಹಗರಣದಲ್ಲಿ ಇಡಿ ಸಂಸ್ಥೆಯಿಂದ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವಿಚಾರಣಾಧೀನ ಕೈದಿಯಾಗಿ ತಿಹಾರ್ ಜೈಲು ನಂ. 2 ರಲ್ಲಿ ಏ.15 ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲು ನಂ. 1 ರಲ್ಲಿ, ಇತರ ಸಚಿವರು ಜೈಲು ಸಂಖ್ಯೆ 7 ರಲ್ಲಿ, ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಜೈಲು ಸಂಖ್ಯೆ 5 ರಲ್ಲಿ ಅದಾಗಲೇ ಬಂಧನದಲ್ಲಿದ್ದಾರೆ.

ಈ ಮಧ್ಯೆ ಕೇಜ್ರಿವಾಲ್ ಐದು ಬೇಡಿಕೆಗಳನ್ನಿಟ್ಟಿದ್ದಾರೆ.

ಮಧುಮೇಹಿಯಾಗಿರುವ ಕಾರಣ ಜೈಲಿನಲ್ಲಿ ಔಷಧಗಳನ್ನು ಒದಗಿಸಲು ಕೇಳಿದ್ದಾರೆ. ಭಗವದ್ಗೀತೆ, ರಾಮಾಯಣ ಮತ್ತು ಪ್ರಧಾನ ಮಂತ್ರಿಗಳು ಹೇಗೆ ನಿರ್ಧರಿಸುತ್ತಾರೆ ಎಂಬ ಮೂರು ಪುಸ್ತಕಗಳನ್ನು ನೀಡಲು, ಪ್ರಸ್ತುತ ಧರಿಸಿರುವ ಧಾರ್ಮಿಕ ಲಾಕೆಟ್ ಅನ್ನು ಉಳಿಸಿಕೊಳ್ಳಲು,
ವಿಶೇಷ ಆಹಾರ ನೀಡಲು ಮತ್ತು ಮೇಜು ಮತ್ತು ಕುರ್ಚಿಗೆ ಬೇಡಿಕೆ ಇಟ್ಟಿದ್ದಾರೆ.

ಅರವಿಂದ್ ಕೇಜ್ರಿವಾಲ್ ದಿನಚರಿ ಇತರ ಕೈದಿಗಳಂತೆಯೆ 6:30 ಕ್ಕೆ ಪ್ರಾರಂಭವಾಗುತ್ತವೆ. ಕೈದಿಗಳಿಗೆ ಚಹಾ ಮತ್ತು ಬ್ರೆಡ್ ನೀಡಲಾಗುತ್ತದೆ.

ಸ್ನಾನದ ನಂತರ, ದೆಹಲಿ ಮುಖ್ಯಮಂತ್ರಿ ನ್ಯಾಯಾಲಯಕ್ಕೆ ಹೊರಡುತ್ತಾರೆ (ವಿಚಾರಣೆಯನ್ನು ನಿಗದಿಪಡಿಸಿದರೆ) ಅಥವಾ ಅವರ ಕಾನೂನು ತಂಡದೊಂದಿಗೆ ಸಭೆಗೆ ಕುಳಿತುಕೊಳ್ಳುತ್ತಾರೆ.

10:30 ರಿಂದ 11 ರವರೆಗೆ ಊಟ ನೀಡಲಾಗುತ್ತದೆ. ದಾಲ್, ಪಲ್ಯ ಮತ್ತು ಐದು ರೊಟ್ಟಿಗಳು ಅಥವಾ ಅನ್ನವನ್ನು ಒಳಗೊಂಡಿರುತ್ತದೆ.

ಮಧ್ಯಾಹ್ನದಿಂದ 3 ಗಂಟೆಯವರೆಗೆ, ಕೇಜ್ರಿವಾಲ್ ಸೇರಿದಂತೆ ಎಲ್ಲಾ ಕೈದಿಗಳನ್ನು ಅವರ ಸೆಲ್‌ಗಳಲ್ಲಿ ಲಾಕ್ ಮಾಡಲಾಗುತ್ತದೆ ಮತ್ತು ಮಧ್ಯಾಹ್ನ 3:30 ರ ಸುಮಾರಿಗೆ ಸಂಜೆ ಚಹಾ ಮತ್ತು ಬಿಸ್ಕತ್‌ಗಳನ್ನು ನೀಡಲಾಗುತ್ತದೆ. ಸಂಜೆ 4 ಗಂಟೆಗೆ ಅವರು ತಮ್ಮ ವಕೀಲರನ್ನು ಭೇಟಿ ಮಾಡಬಹುದು. ತಮ್ಮ ಪತ್ನಿ ಮಕ್ಕಳನ್ನು ಸೇರಿಸಿ ವಾರಕ್ಕೆ ಎರಡು ಬಾರಿ ಒಟ್ಟು ಐದು ಜನರ ಭೇಟಿಗೆ ಅವಕಾಶವಿದೆ.

ಸಂಜೆ 5:30 ಕ್ಕೆ ಊಟ ನಂತರ ರಾತ್ರಿ 7 ಗಂಟೆಗೆ ಕೈದಿಗಳನ್ನು ಲಾಕ್ ಮಾಡಲಾಗುತ್ತದೆ. ನಿಗದಿತ ಜೈಲು ಚಟುವಟಿಕೆಗಳಾದ ಊಟ ಮತ್ತು ಲಾಕ್-ಅಪ್ ಹೊರತುಪಡಿಸಿ ಟಿವಿ ವೀಕ್ಷಿಸಲು ಸಾಧ್ಯವಾಗುತ್ತದೆ. ತುರ್ತು ಸಂದರ್ಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ 24/7 ಲಭ್ಯವಿರುತ್ತಾರೆ ಮತ್ತು ಕೇಜ್ರಿವಾಲ್ ಮಧುಮೇಹಿಗಳಾಗಿರುವುದರಿಂದ ನಿಯಮಿತ ತಪಾಸಣೆಗಳನ್ನು ನಡೆಸಲಾಗುತ್ತದೆ.