ಈ ಚಿತ್ರ ಕಲಾವಿದನ ಕುಂಚದಲ್ಲಿ ಅರಳಿದ ಚಿತ್ರಗಳನ್ನು ನೋಡ್ತಾ ಇದ್ರೆ ನೀವು ಮೈಮರೆತು ಬಿಡುತ್ತೀರಿ, ಈ ಕಲಾವಿದನ ಜಾಣ್ಮೆ ಯಿಂದ ಅರಳುವ ಚಿತ್ರ ಬಲು ಚಂದವೋ ಚಂದ. ಇಂತಹ ಬೆರಗಿನ ಚಿತ್ರ ಬಿಡಿಸುವ ದೇಶಿ ಕಲೆಯ ಅಪ್ಪಟ ಕಲಾಕಾರನೇ ಸಂತೋಷ್ ಮಾಳ.
ಸಂತೋಷ್ ಮೂಲತಃ ಕಾರ್ಕಳ ತಾಲೂಕಿನ ಮಾಳ ಗ್ರಾಮದವರು. ವೃತ್ತಿಯ ಜೊತೆಗೆ ಇವರಿಗೆ ಚಿತ್ರವೂ ಒಂದು ಚಂದದ ಹವ್ಯಾಸ. ತುಳುನಾಡಿನ ಯಕ್ಷಗಾನ, ಜನಪದ, ಗ್ರಾಮೀಣ ಸೊಗಡಿನ ಚಿತ್ರಗಳು ಇವರ ಕುಂಚದಲ್ಲಿ ಅರಳಿದೆ. ಆ ಎಲ್ಲಾ ಚಿತ್ರಗಳು ಅವರ ಪ್ರತಿಭೆಯನ್ನು ಇನ್ನಷ್ಟು ಸೃಜನಶೀಲವಾಗಿಸಿವೆ.
-ಕಲಾವಿದನ ಕುಂಚದ ಬೆರಗಿನ ವಿಡಿಯೋ ಇಲ್ಲಿದೆ
ಕತೆ ಹೇಳ್ತವೆ ಚಿತ್ರಗಳು:
ಇವರ ಚಿತ್ರ ಗಳಲ್ಲಿ ನಗರದೊಳಗಿನ ಹಳ್ಳಿ ನಾಡಿನ ಜನರ ಮುಗ್ಧ ತೆ, ಹಳ್ಳಿ ಜನರ ಸೂಕ್ಷ್ಮ ಸಂವೇದನೆ, ಕಂಬಳ ಗದ್ದೆಯ ಕಂಬಳ ಕೋಣಗಳ ಬೆರಗಿನ ನೋಟಗಳೆಲ್ಲಾ ಮೈ ತುಂಬಿ ಅರಳಿ ನಿಂತಿವೆ.
ಹಳ್ಳಿಯ ಕೋಳಿ ಅಂಕದ ಕಾದಾಟದ ಚಿತ್ರಗಳು, ಕರಾವಳಿ ಭಾಗದ ಕೋಲ ಕಡಗದ ಚಿತ್ರಗಳೆಲ್ಲಾ ಕತೆ ಹೇಳುತ್ತವೆ.
ಗಮನ ಸೆಳೆಯುವ ಚಿತ್ರಕಾರ:
ಮಾನವೀಯ ನೆಲೆಗಟ್ಟಿನ ಮೇಲೆ ಬಿಂಬಿತವಾಗಿರುವ ಇವರು ಬಿಡಿಸಿದ ಚಿತ್ರಗಳಲ್ಲಿ ತಾತ್ವಿಕತೆ, ಶ್ರೀಮಂತ ಭಾವನೆಗಳೆಲ್ಲಾ ಒಡಮೂಡಿದೆ. ಇಪ್ಪತ್ತೈದಕ್ಕೂ ಹೆಚ್ಚು ರಾಜ್ಯ ಮಟ್ಟದ ಕಲಾ ಪ್ರದರ್ಶನದಲ್ಲಿ ಇವರ ಚಿತ್ರಗಳು ಗಮನ ಸೆಳೆದಿವೆ.
2013 ರ ಮೈಸೂರಿನ ದಸರಾ ಮೆರವಣಿಗೆಯಲ್ಲಿ ನಡೆದ ಟ್ಯಾಬ್ಲೊ ದಲ್ಲಿ ಇವರಿಂದ ರಚಿತ ಚಿತ್ರವು ಆಯ್ಕೆ ಯಾಗಿ ರಾಜ್ಯ ಮಟ್ಟದಲ್ಲಿ ಮಿಂಚಿತ್ತು.
ಸರಕಾರಿ ಪ್ರಾಯೊಜಿತ ನಲವತ್ತ ನಾಲ್ಕನೇ ಬೆಂಗಳೂರಿನ ಲಲಿತ ಕಲಾ ಅಕಾಡೆಮಿಯ ವಾರ್ಷಿಕ ಸಮಾರಂಭದಲ್ಲಿ ಸಂತೋಷ್ ಅವರ ಚಿತ್ರ ವು ಆಯ್ಕೆಗೊಂಡಿದ್ದು ಇವರ ಕಲಾ ಪ್ರೇಮಕ್ಕೆ ಸಾಕ್ಷಿಯಾಗಿತ್ತು.
ಕಲೆಯ ಪಾಠನೂ ಮಾಡ್ತಾರೆ:
ಸಂತೋಷ್ ಬರೀ ತಾವು ಮಾತ್ರ ಮಿಂಚುತ್ತಿಲ್ಲ. ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಾ ಶಿಕ್ಷಣ ನೀಡಿ ಅದೆಷ್ಟೋ ಕಲಾ ಪ್ರೇಮಿಗಳಿಗೆ ಅವಕಾಶ ಬಾಗಿಲು ತೆರೆದಿಟ್ಟಿದ್ದಾರೆ.
ಪ್ರಸ್ತುತ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವು ತಾವೂ ಬೆಳಗಿ ಎಳೆಯ ಕಲಾಪ್ರತಿಭೆಗಳನ್ನು ಮುನ್ನಲೆಗೆ ತರುತ್ತಿದ್ದಾರೆ. ಇವರ ಕಲಾಪ್ರಪಂಚದಲ್ಲಿ ಇನ್ನಷ್ಟು ಸುಂದರ ಕನಸುಗಳು ಮೂಡಿ ನನಸಾಗಲಿ ಎನ್ನುವುದು ನಮ್ಮ ಹಾರೈಕೆ.
-ರಾಂ ಅಜೆಕಾರ್