ಆರ್ಥಿಕ ಗಣತಿ ಕಾರ್ಯಾಚರಣೆ, ಸಹಕರಿಸಿ: ಜಿಲ್ಲಾಧಿಕಾರಿ

ಉಡುಪಿ, ಜೂನ್ 15: ಕೇಂದ್ರ ಸರ್ಕಾರದ ಯೋಜನೆಯಂತೆ ರಾಜ್ಯದಾದ್ಯಂತ 7 ನೇ ಆರ್ಥಿಕ ಗಣತಿಯ ಕಾರ್ಯಾಚರಣೆಯನ್ನು ಜೂನ್ ತಿಂಗಳಿನಿಂದ ಕೈಗೊಳ್ಳಲು ತೀರ್ಮಾನಿಸಲಾಗಿದ್ದು, ಉಡುಪಿ ಜಿಲ್ಲೆಯಾದ್ಯಂತ ಜೂನ್ 15 ರಿಂದ ಗಣತಿಯ ಕಾರ್ಯವು ಆರಂಭವಾಗಿರುತ್ತದೆ.
ಗಣತಿಯ ಮುಖ್ಯ ಉದ್ದೇಶ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿಯನ್ನು ನಡೆಸುವುದಾಗಿದೆ. ಈ ಗಣತಿಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಸ್ವಂತ ಉಪಯೋಗಕ್ಕಾಗಿ ಅರಕುಗಳ ಉತ್ಪಾದನೆ, ವಿತರಣೆ, ಮಾರಾಟ ಸೇವೆ ಇತ್ಯಾದಿ ಘಟಕಗಳ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮಗಳ ಪೂರ್ಣ ಏರಿಕೆಯನ್ನು ಮಾಡಲಾಗುತ್ತದೆ ಈ ಸಂಬಂಧ ನೇಮಕಾತಿ ಮಾಡಲಾಗುವ ಗಣತಿದಾರರು ಹಾಗೂ ಮೇಲ್ವಿಚಾರಣಾಧಿಕಾರಿಗಳು ಪ್ರತಿಯೊಂದು ಕಟ್ಟಡಗಳಿಗೆ/ ಮನೆಗಳಿಗೆ/ ಕುಟುಂಬಗಳಿಗೆ ಭೇಟಿ ಕೊಟ್ಟು ಕುಟುಂಬದೊಳಗೆ ಹಾಗೂ ಕುಟುಂಬದ ಹೊರಗೆ ನಡೆಸುತ್ತಿರುವ ಮತ್ತು ನಿರ್ದಿಷ್ಟ ಕಟ್ಟಡಗಳಲ್ಲಿ ನಡೆಸುತ್ತಿರುವ ಉದ್ಯಮಗಳನ್ನು ಗಣತಿ ಮಾಡಲಿದ್ದಾರೆ. ಈ ಗಣತಿಯನ್ನು ಗಣತಿದಾರರು ಮೊಬೈಲ್ ತಂತ್ರಾಂಶದ ಮೂಲಕ ನಡೆಸಲಿದ್ದು, ಸರಕಾರದ ವಿವಿಧ ಯೋಜನೆಗಳನ್ನು ರೂಪಿಸಲು ಈ ಗಣತಿ ಅತೀ ಉಪಯುಕ್ತವಾಗಿದೆ.
ಆದುದರಿಂದ ಗಣತಿ ಕಾರ್ಯಕ್ಕಾಗಿ ಆಗಮಿಸುವ ಗಣತಿದಾರರಿಗೆ ಅವಶ್ಯಕ ಮಾಹಿತಿಯನ್ನು ನೀಡಿ, ಸಹಕರಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.