ತೆಲುಗು ನಿರ್ಮಾಪಕ ನೂತನ್ ನಾಯ್ಡು ಉಡುಪಿಯಲ್ಲಿ ಅರೆಸ್ಟ್

ಉಡುಪಿ: ಆಂಧ್ರಪ್ರದೇಶದಲ್ಲಿ ದಲಿತ ಯುವಕನ ಮೇಲಿನ ದೌರ್ಜನ್ಯ ಪ್ರಕರಣದ ಆರೋಪಿ ತೆಲುಗು ಚಿತ್ರ ನಿರ್ಮಾಪಕ ನೂತನ್ ನಾಯ್ಡು ಎಂಬಾತನನ್ನು ಪೊಲೀಸರು ಉಡುಪಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ವಿಶಾಖಪಟ್ಟಣ ಪೊಲೀಸರ ಮಾಹಿತಿಯ ಆಧಾರದ ಮೇಲೆ ನಿನ್ನೆ ಬೆಳಗ್ಗೆ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರ ನಿರ್ಮಾಪಕನಾಗಿರುವ ಈತ, ತೆಲುಗು ಬಿಗ್‌ಬಾಸ್ ಮೊದಲ ಆವೃತ್ತಿಯ ಸ್ಪರ್ಧಿ ಕೂಡ ಆಗಿದ್ದ. ದಲಿತ ಯುವಕನ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಈತನ ಪಾತ್ರವಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಆಂಧ್ರಪ್ರದೇಶದಲ್ಲಿ ಭಾರೀ ಸದ್ದು ಮಾಡಿದ್ದು, ಜನಾಕ್ರೋಶಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಆರೋಪಿ ನೂತನ್ ರೈಲಿನ ಮೂಲಕ ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದನು ಎನ್ನಲಾಗಿದೆ.

ರೈಲು ಮಂಗಳೂರಿನಿಂದ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಮೊದಲೇ ಅಲರ್ಟ್ ಆಗಿದ್ದ ಮಣಿಪಾಲ ಠಾಣೆಯ ಪೊಲೀಸರು ಆರೋಪಿಯನ್ನು ನಿಲ್ದಾಣದಲ್ಲಿ ಅರೆಸ್ಟ್ ಮಾಡಿದ್ದಾರೆ. ಹಾಗೆ ಆತನಲ್ಲಿದ್ದ ಮೊಬೈಲ್ ಸಹಿತ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಳಿಕ ಆರೋಪಿ ನೂತನ್‌ ನನ್ನು ವಿಶಾಖಪಟ್ಟಣ ಪೊಲೀಸರಿಗೆ ಒಪ್ಪಿಸಲಾಗಿದ್ದು, ಅವರು ಆರೋಪಿಯನ್ನು ಉಡುಪಿ ನ್ಯಾಯಲಯಕ್ಕೆ ಹಾಜರುಪಡಿಸಿ ವಿಶಾಖಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.