ಶೃಂಗೇರಿ: ಶ್ರೀ ಶಾರದಾ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶೃಂಗೇರಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅಕ್ಟೋಬರ್ 11ರಿಂದ 19ರವರೆಗೆ ಸಂಚಿಯ ಬೀದಿ ಉತ್ಸವ ನಡೆಯಲಿದೆ. ಪ್ರತಿದಿನ ಸಂಜೆ 6 ಗಂಟೆಯಿಂದ ನಡೆಯುವ ಉತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ.
ಅಕ್ಟೋಬರ್ 11ರಂದು ಅಡ್ಡಗದ್ದೆಯಿಂದ ಉತ್ಸವ ಆರಂಭವಾಗಲಿದ್ದು, 12ರಂದು ಮೆಣಸೆ, 13ರಂದು ಕೋಟಗೋಡು, 14ರಂದು ವಿದ್ಯಾರಣ್ಯಪುರ, 15ರಂದು ಧರಿಕವಲಸೆ, 16ರಂದು ನೆಮ್ಮಾರು, 17ರಂದು ಬೇಗಾರು, 18ರಂದು ಕಿಗ್ಗಾ ಹಾಗೂ 19ರಂದು ಮರ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಸವ ನಡೆಯಲಿದೆ.
ಗ್ರಾಮೀಣ ಭಾಗದ ಭಕ್ತರು, ದೇವಸ್ಥಾನ ಸೇವಾ ಸಮಿತಿಗಳು, ಭಜನಾ ಮಂಡಳಿಗಳು, ಮಹಿಳಾ ಹಾಗೂ ಯುವಕ ಸಂಘಗಳು, ಶಾಲಾ-ಕಾಲೇಜುಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಪ್ರತಿದಿನ ಭಜನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಶರನ್ನವರಾತ್ರಿ ಹಿನ್ನೆಲೆಯಲ್ಲಿ ನಡೆಯುವ ಬೀದಿ ಉತ್ಸವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಒಗ್ಗಟ್ಟಿಗೆ ಮತ್ತಷ್ಟು ಮೆರುಗು ನೀಡಲಿದೆ.















