ಉಡುಪಿ ಎಪಿಎಂಸಿಯಿಂದ ಆರ್ಥಿಕ ಪ್ರಗತಿ: ವಾರ್ಷಿಕ ಸರಾಸರಿ 2.5ಕೋಟಿ ರೂ. ಸಂಗ್ರಹ

* ಉಡುಪಿ Xpress ವಿಶೇಷ

ಉಡುಪಿ, ಜೂ. 30: 2015ರವರೆಗೆ ಒಂದು ಕೋಟಿ ರೂ.ಗೆ ಮೀರದ ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯ ವಾರ್ಷಿಕ ಆದಾಯ ಇದೀಗ ಕಳೆದ ಮೂರು ವರ್ಷಗಳಿಂದ 2.5ಕೋಟಿ ರೂ.ಗೆ ಏರಿಕೆಯಾಗಿದೆ. ಈ ಮೂಲಕ ಎಪಿಎಂಸಿ ಆರ್ಥಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದೆ.
ಆದಿಉಡುಪಿ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ವಾರ ನಡೆಯುವ ವಾರದ ಸಂತೆಯ ವ್ಯಾಪರಸ್ಥರಿಗೆ ವಿಧಿಸುವ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಇದರಿಂದ ಸಂಗ್ರಹವಾದ ಶುಲ್ಕ ಮತ್ತು ಅಂಗಡಿಗಳ ಪರವಾನಿಗೆ, ನವೀಕರಣ, ಗ್ರಾಮೀಣ ಪ್ರದೇಶಗಳಲ್ಲಿರುವ ದಿನಸಿ ಅಂಗಡಿಗಳ ಪರವಾನಿಗೆಯಿಂದಾಗಿ ವಾರ್ಷಿಕ ಆದಾಯವನ್ನು ಹೆಚ್ಚಿಸಿಕೊಳ್ಳಲಾಗಿದೆ. ಆದಿಉಡುಪಿಯಲ್ಲಿರುವ 10 ಎಕರೆ ಜಾಗ ದಲ್ಲಿರುವ ಮುಖ್ಯ ಮಾರುಕಟ್ಟೆಯ ಪ್ರಾಂಗಣದಲ್ಲಿ ನಬಾರ್ಡ್ ಯೋಜನೆಯಡಿ ಒಟ್ಟು 86ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ದಾಸ್ತಾನು(ಗೋದಾಮು)ಕೇಂದ್ರಗಳನ್ನು ನಿರ್ಮಿಸಲಾಗಿದೆ.

ಪ್ರತಿಯೊಂದು ಗೋದಾಮಿನ ಸಂಗ್ರಹ ಸಾಮರ್ಥ್ಯವು 150 ಮೆಟ್ರಿಕ್ ಟನ್ ಆಗಿದ್ದು, ಇದಕ್ಕೆ ತಲಾ 21ಲಕ್ಷ ರೂ. ವ್ಯಯಿಸಲಾಗಿದೆ. ಇಲಿ, ಹೆಗ್ಗಣ, ಹಾವು ಗಳು ಗೋದಾಮು ಒಳಗೆ ನುಸುಳಿ ಉತ್ಪನ್ನಗಳಿಗೆ ಹಾನಿ ಉಂಟು ಮಾಡದ ರೀತಿಯಲ್ಲಿ ರ್ಯಾಟ್‌ಫ್ರೂಪ್ ಸ್ಲಾಬ್‌ನ್ನು ಈ ಗೋದಾಮುಗಳಿಗೆ ಹಾಕಲಾಗಿದೆ. ಪ್ರತಿಯೊಂದು ಗೋದಾಮು 1350 ಚದರ ಅಡಿ ವಿಸ್ತ್ರೀರ್ಣ ಹೊಂದಿದೆ. ಮೂರು ತಿಂಗಳ ಹಿಂದೆ ಆರಂಭಿಸಲಾಗಿರುವ ಈ ಗೋದಾಮು ಕಟ್ಟಡದ ಕಾಮಗಾರಿ ಇದೀಗ ಪೂರ್ಣಗೊಂಡಿದೆ.
ಈ ಗೋದಾಮುಗಳಿಗೆ ಎಪಿಎಂಸಿಯಿಂದ ಪರವಾನಿಗೆ ಪಡೆದ ವ್ಯಾಪರಸ್ಥರಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. ಇಲ್ಲಿ ತೆಂಗಿನಕಾಯಿ, ಗೇರು ಬೀಜ, ಅಡಿಕೆ, ಭತ್ತ ಇವುಗಳ ದಾಸ್ತಾನಿಗೆ ಅವಕಾಶ ಕಲ್ಪಿಸಲಾಗುವುದು. ಇವರು ಬಾರದಿದ್ದರೆ ಏಲಂ ಮೂಲಕ ಕೃಷಿ ಮಾರುಕಟ್ಟೆಗೆ ಪೂರಕವಾದ ವ್ಯಾಪರಸ್ಥರಿಗೆ ಒದಗಿಸಲು ನಿರ್ಧರಿಸಲಾಗಿದೆ. ಇಲ್ಲದಿದ್ದರೆ ಸಾಮಾನ್ಯ ವ್ಯಾಪರಸ್ಥರಿಗೆ ಈ ಗೋದಾಮಿನಲ್ಲಿ ಅವಕಾಶ ಕಲ್ಪಿಸಲಾಗುವುದು. ಒಟ್ಟಾರೆ ಈ ಗೋದಾಮುಗಳಲ್ಲಿ ಕೃಷಿ ಉತ್ಪನ್ನಗಳಿಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ ಎಂದು ಉಡುಪಿ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರ ಕೆ.ನಾಯ್ಕ ತಿಳಿಸಿದ್ದಾರೆ.

ಗೋದಾಮುಗಳಿಗೆ ಹೆಚ್ಚಿದ ಬೇಡಿಕೆ

ಈಗಾಗಲೇ ಎಪಿಎಂಸಿ ಆವರಣದಲ್ಲಿ ಸುಮಾರು 30 ಗೋದಾಮುಗಳಿದ್ದು, ಇದರಲ್ಲಿ ಹಣ್ಣುಹಂಪಲು, ತರಕಾರಿ, ದಿನಸಿ ಸಾಮಾನು, ಬಾಳೆಹಣ್ಣುಗಳ ದಾಸ್ತಾನು ಮಾಡಲಾಗುತ್ತಿದೆ. ಇಲ್ಲಿ ಗೋದಾಮುಗಳಿಗೆ ಬೇಡಿಕೆ ಹೆಚ್ಚಿರುವುದ ರಿಂದ ಇನ್ನಷ್ಟು ಗೋದಾಮುಗಳು ನಿರ್ಮಾಣಗೊಳ್ಳಬೇಕಾಗಿವೆ.

ಅದೇ ರೀತಿ ಎಪಿಎಂಸಿ ಪ್ರಾಂಗಣದಲ್ಲಿ 30ಲಕ್ಷ ರೂ. ಮತ್ತು 13ಲಕ್ಷ ರೂ. ವೆಚ್ಚದಲ್ಲಿ ಎರಡು ಮುಚ್ಚು ಹರಾಜು ಕಟ್ಟೆನ್ನು ನಿರ್ಮಸಲಾಗಿದೆ. ಬಹಳ ಸಮಯ ಕೃಷಿ ಉತ್ಪನ್ನಗಳು ಹಾಳಾಗದಂತೆ ವ್ಯವಸ್ಥೆ ಇರುವ ವೈಜ್ಞಾನಿಕ ಗೋದಾಮು ಈಗಾಗಲೇ ನಿರ್ಮಾಣಗೊಂಡು ಬಳಕೆಗೆ ಸಜ್ಜಾಗಿದೆ. ತಲಾ 500 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯದ ಹೊಂದಿರುವ ಈ ಎರಡು ಗೋದಾಮುಗಳನ್ನು ಒಟ್ಟು 1.10ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

——————————–

ಉಡುಪಿ ಎಂಪಿಎಂಸಿ ಆರ್ಥಿಕವಾಗಿ ಪ್ರಗತಿ ಸಾಧಿಸಿದರೂ ಪ್ರತಿವರ್ಷ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ವಾರ್ಷಿಕ 60-70ಸಾವಿರ ರೂ. ಕಟ್ಟಡ ತೆರಿಗೆಯನ್ನು ನಗರಸಭೆಗೆ ಪಾವತಿಸುತ್ತಿದ್ದೇವೆ. ಇಲ್ಲಿಗೆ ಅಗತ್ಯವಾಗಿ ಬೇಕಾಗಿರುವ ಒಳಚರಂಡಿ ಹಾಗೂ ನೀರಿನ ವ್ಯವಸ್ಥೆಯನ್ನು ಸ್ಥಳೀಯ ಆಡಳಿತ ಕಲ್ಪಿಸ ಬೇಕಾಗಿದೆ.

– ಕೆ.ಶ್ಯಾಮ್‌ಪ್ರಸಾದ್, ಅಧ್ಯಕ್ಷರು, ಎಪಿಎಂಸಿ, ಉಡುಪಿ