ಉಡುಪಿ: ಕಳೆದ ಎರಡು ವರ್ಷಗಳ ಹಿಂದೆ ಎರ್ಮಾಳು ಗ್ರಾಮದ ಉಚ್ಚಿಲ ಬಡ್ಡಿಂಜೆ ಮಠ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಎಸಗಿ ಪಾದಚಾರಿ ಅಣ್ಣಯ್ಯ ಪೂಜಾರಿ ಸಾವಿಗೆ
ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಾರು ಗ್ರಾಮದ ಮೊಹಮ್ಮದ್ ಫಯಾಜ್
ಎಂಬಾತನಿಗೆ ಉಡುಪಿ 2ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯ 6 ತಿಂಗಳ ಶಿಕ್ಷೆ
ಹಾಗೂ ₨ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಆರೋಪಿ ಮೊಹಮ್ಮದ್ 2016ರ ಮಾರ್ಚ್ 3ರಂದು ರಾತ್ರಿ 7.45 ಸುಮಾರಿಗೆ ಉಡುಪಿ ಕಡೆಯಿಂದ
ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮೋಟಾರ್ ಸೈಕಲ್ನ್ನು
ಚಲಾಯಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಬದಿಯಲ್ಲಿ ನಡೆದುಕೊಂಡು
ಹೋಗುತ್ತಿದ್ದ ಪಾದಚಾರಿ ಅಣ್ಣಯ್ಯ ಪೂಜಾರಿ ಎಂಬುವವರಿಗೆ ಹಿಂದಿನಿಂದ ಡಿಕ್ಕಿ
ಹೊಡೆದಿದ್ದನು. ಅಪಘಾತದ ಪರಿಣಾಮ ಅಣ್ಣಯ್ಯ ಪೂಜಾರಿ ತೀವ್ರ ಸ್ವರೂಪದ ಗಾಯಗೊಂಡು ಉಡುಪಿ
ಆದರ್ಶ ಆಸ್ಪತ್ರೆಯಲ್ಲಿ 2016ರ ಏಪ್ರಿಲ್ 2ರಂದು ಮೃತಪಟ್ಟಿದ್ದರು. ಈ ಬಗ್ಗೆ
ಪಡುಬಿದ್ರಿ ವೃತ್ತ ನಿರೀಕ್ಷಕ ಸುನೀಲ್ ವೈ. ನಾಯ್ಕ್ ತನಿಖೆ ನಡೆಸಿ, ನ್ಯಾಯಾಲಯಕ್ಕೆ
ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಸಾಕ್ಷ್ಯ ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ಧ ಮೇಲಿನ ಪ್ರಕರಣವು
ಸಾಬೀತಾಗಿದೆ ಎಂದು ತೀರ್ಮಾನಿಸಿದ ನ್ಯಾಯಾಧೀಶೆ ಶೋಭಾ ಇ. ಅವರು ಆರೋಪಿಗೆ ಈ ಮೇಲಿನಂತೆ
ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಕೆ. ಜಯಂತಿ
ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.