ಬಿಹಾರದ ಜಮುಯಿಯಲ್ಲಿ 230 ಮಿಲಿಯನ್ ಟನ್ ಚಿನ್ನದ ನಿಕ್ಷೇಪ? ಇರುವೆಗಳಿಂದ ಬಯಲಾಯಿತು ಚಿನ್ನದ ರಹಸ್ಯ!!

ಬಿಹಾರ: ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಬಿಹಾರದ ಜಮುಯಿ ಜಿಲ್ಲೆಯಲ್ಲಿ ಸುಮಾರು 230 ಮಿಲಿಯನ್ ಟನ್ ಚಿನ್ನ ಇರುವ ಬಗ್ಗೆ ಸಮೀಕ್ಷೆಯನ್ನು ಹೊಂದಿದೆ. ಚಿನ್ನದ ಜೊತೆಗೆ ಸುಮಾರು 37.6 ಟನ್ ಖನಿಜ ಅದಿರು ಕೂಡ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಮುಯಿ ಜಿಲ್ಲೆಯಲ್ಲಿ ಚಿನ್ನದ ಹುಡುಕಾಟ ನಡೆಸಲು ನಿತೀಶ್ ಕುಮಾರ್ ಸರ್ಕಾರ ಇತ್ತೀಚೆಗೆ ನಿರ್ಧರಿಸಿದ್ದು, ಈ ಕುರಿತು ಕೇಂದ್ರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ದೇಶದ ಶೇ.44ರಷ್ಟು ಚಿನ್ನದ ನಿಕ್ಷೇಪ ಈ ಪ್ರದೇಶವೊದರಲ್ಲೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಈ ಜಾಗದಲ್ಲಿ ಚಿನ್ನದ ನಿಕ್ಷೇಪಗಳಿರುವ ಬಗ್ಗೆ ನಲ್ವತ್ತು ವರ್ಷಗಳ ಹಿಂದಿನವರೆಗೆ ಯಾರಿಗೂ ಗೊತ್ತಿರಲಿಲ್ಲ. ದಂತಕಥೆಗಳ ಪ್ರಕಾರ ನಲವತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಬೃಹತ್ ಆಲದ ಮರವಿತ್ತು. ಸೂರ್ಯನ ಶಾಖ ಮತ್ತು ಶಾಖದಿಂದ ತಪ್ಪಿಸಿಕೊಳ್ಳಲು ಇರುವೆಗಳು ಆಲದ ಮರದ ಕೆಳಗೆ ಗೂಡು ಕಟ್ಟಲು ಪ್ರಾರಂಭಿಸುತ್ತವೆ. ಇರುವೆಗಳು ಕೆಳಗಿನಿಂದ ಮಣ್ಣನ್ನು ಎತ್ತಿ ಹಾಕಲು ಪ್ರಾರಂಭಿಸಿದಾಗ, ಸ್ಥಳೀಯರು ಹಳದಿ ಬಣ್ಣದ ಸಣ್ಣ ಕಣಗಳು ಕೆಂಪು ಮಣ್ಣಿನಲ್ಲಿ ಬೆರೆತಿರುವುದನ್ನು ನೋಡುತ್ತಾರೆ. ಆ ಕ್ಷಣವೇ ಈ ಸುದ್ದಿ ಆ ಪ್ರದೇಶದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ಅಲ್ಲಿಂದ ಮುಂದೆ ಚಿನ್ನದ ಬೇಟೆ ಆರಂಭವಾಗುತ್ತದೆ.

ಬಿಹಾರದ ಮಾವೋವಾದಿಗಳ ಪ್ರಾಬಲ್ಯವಿರುವ ಜುಮಯಿ ಜಿಲ್ಲೆಯ ಕರ್ಮಾತಿಯಾ, ಝಾಝಾ ಮತ್ತು ಸೋನೋ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪಗಳಿವೆ ಎನ್ನಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಳೆದ ವರ್ಷ ಲೋಕಸಭೆಯಲ್ಲಿ ಲಿಖಿತ ಉತ್ತರವಾಗಿ ಬಿಹಾರದಲ್ಲಿ ಚಿನ್ನದ ಗಣಿಗಾರಿಕೆ ವಿಷಯವನ್ನು ಪ್ರಸ್ತಾಪಿಸಿದ್ದರು. ದೇಶದ ಒಟ್ಟು ಚಿನ್ನದ ಶೇಕಡಾ 44 ರಷ್ಟು ಚಿನ್ನಬಿಹಾರದ ಗಣಿಗಳಲ್ಲಿದೆ ಎಂದು ಕೇಂದ್ರ ಸಚಿವ ಲೋಕಸಭೆಗೆ ತಿಳಿಸಿದ್ದರು. ಚಿನ್ನದ ಒಟ್ಟು ಮೊತ್ತ ಸುಮಾರು 230 ಮಿಲಿಯನ್ ಟನ್ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಬೃಹತ್ ಚಿನ್ನದ ಗಣಿ ಅನ್ವೇಷಣೆಗೆ ಹೊರಡುವ ಮುನ್ನ ಬಿಹಾರ ಸರ್ಕಾರ ಮುಂದಿನ ಒಂದು ತಿಂಗಳಲ್ಲಿ ಕೇಂದ್ರ ಏಜೆನ್ಸಿಯೊಂದಿಗೆ ಎಂಒಯುಗೆ ಸಹಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.