ದರ್ಶನ್‌ಗೆ ಮತ್ತೊಂದು ಸಂಕಷ್ಟ? ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-14 ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಕಾಣಿಸಿಕೊಂಡಿದೆ. ಪ್ರಕರಣದ ಎ-14 ಆರೋಪಿ ಪ್ರದೋಷ್, ತನ್ನನ್ನು ಮಾಫಿ ಸಾಕ್ಷಿ (Approver) ಯಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ಪ್ರದೋಷ್ ಸಲ್ಲಿಸಿರುವ ಅರ್ಜಿಯಲ್ಲಿ, ಪ್ರಕರಣದ ಕುರಿತು ಸತ್ಯಾಂಶಗಳನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾನೆ. ಈ ಅರ್ಜಿಯ ವಿಚಾರಣೆಗಾಗಿ ಇಂದು ಮಧ್ಯಾಹ್ನ 12 ಗಂಟೆಗೆ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸುವ ಸಾಧ್ಯತೆ ಇದೆ. ವಿಚಾರಣೆ ವೇಳೆ ಪ್ರಕರಣದ ಘಟನಾವಳಿಗಳ ಕುರಿತು ತನ್ನ ಹೇಳಿಕೆಯನ್ನು ದಾಖಲಿಸುವ ನಿರೀಕ್ಷೆಯಿದೆ.

ಕಾನೂನು ಪ್ರಕಾರ, ಆರೋಪಿ ಮಾಫಿ ಸಾಕ್ಷಿಯಾಗಲು ನ್ಯಾಯಾಲಯ ಅನುಮತಿ ನೀಡಿದರೆ, ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸುವ ಷರತ್ತಿನೊಂದಿಗೆ ಆತನ ಸಾಕ್ಷ್ಯವನ್ನು ಪರಿಗಣಿಸಲಾಗುತ್ತದೆ. ಅಂತಿಮ ನಿರ್ಧಾರ ನ್ಯಾಯಾಲಯದ ವಿವೇಚನೆಗೆ ಒಳಪಟ್ಟಿರುತ್ತದೆ.

ಪ್ರದೋಷ್ ವಿರುದ್ಧದ ಆರೋಪಗಳೇನು?

ಪೊಲೀಸರ ಆರೋಪದ ಪ್ರಕಾರ, ಸ್ಟೋನಿ ಬ್ರೂಕ್‌ನಿಂದ ದರ್ಶನ್ ಅವರೊಂದಿಗೆ ಪ್ರದೋಷ್ ಶೆಡ್‌ಗೆ ತೆರಳಿದ್ದ. ಹಲ್ಲೆ ನಡೆಯುವ ವೇಳೆ ಆತ ಸ್ಥಳದಲ್ಲೇ ಇದ್ದ ಎನ್ನಲಾಗಿದೆ. ಅಲ್ಲದೆ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಿಲ್ಲಿಸುವಂತೆ “ಸಾಕು, ಇಲ್ಲವಾದರೆ ಸತ್ತು ಹೋಗ್ತಾನೆ” ಎಂದು ಹೇಳಿದ್ದಾನೆ ಎಂಬ ಉಲ್ಲೇಖವೂ ಪೊಲೀಸ್ ದಾಖಲೆಗಳಲ್ಲಿ ಇದೆ ಎಂದು ತಿಳಿದುಬಂದಿದೆ.

ಇದೇ ವೇಳೆ, ಮೃತದೇಹ ಸಾಗಾಟಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿದ್ದ ಹಾಗೂ ಶವ ಸಾಗಿಸುವ ಪ್ರಕ್ರಿಯೆ ಮುಗಿಯುವವರೆಗೂ ದರ್ಶನ್ ಅವರೊಂದಿಗೇ ಇದ್ದ ಎನ್ನುವುದು ತನಿಖಾ ಸಂಸ್ಥೆಯ ಆರೋಪವಾಗಿದೆ.

ಪ್ರದೋಷ್‌ನ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸುತ್ತದೆಯೇ ಮತ್ತು ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುತ್ತದೆಯೇ ಎಂಬುದು ಪ್ರಕರಣದ ಮುಂದಿನ ಹಂತದಲ್ಲಿ ಮಹತ್ವದ ಬೆಳವಣಿಗೆಯಾಗಲಿದೆ.