ಉಡುಪಿ: ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ಗಣಹೋಮ, ನವಕ ಪ್ರಧಾನ ಹೋಮ, ಮಹಾಪೂಜೆ ನೆರವೇರಿತು. ಮಧ್ಯಾಹ್ನ ರಥೋತ್ಸವ ನಡೆದ ಬಳಿಕ ಮಹಾಅನ್ನಸಂತರ್ಪಣೆ ನಡೆಯಿತು.
ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ಸಂಜೆ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಬಳಿಕ ಮಾರ್ಪಳ್ಳಿ ಮಹಾಲಿಂಗೇಶ್ವರ ಯಕ್ಷಗಾನ ಕಲಾಮಂಡಳಿಯ ಸದಸ್ಯರಿಂದ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರದರ್ಶನಗೊಂಡಿತು. ರಾತ್ರಿ ನಡೆದ ಮಹಾರಥೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ರಥವನ್ನು ಎಳೆದು ಭಕ್ತಿಪರಾಕಷ್ಠೆ ಮೆರೆದರು. ನಾಸಿಕ್ ಬ್ಯಾಂಡ್, ಚೆಂಡೆ, ವಾದ್ಯ, ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ವೈಭವದ ವಾರ್ಷಿಕ ಮಹಾರಥೋತ್ಸವಕ್ಕೆ ತೆರೆಬಿತ್ತು.
















