ಕರಾವಳಿ ಮೀನುಗಾರರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಿ: ಯಶ್‍ಪಾಲ್ ಸುವರ್ಣ ಆಗ್ರಹ

ಉಡುಪಿ: ಕರಾವಳಿ ಕರ್ನಾಟದ 360 ಕಿಲೋ ಮೀಟರ್ ವ್ಯಾಪ್ತಿಯ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಭಾಗದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡಿರುವ ಮೀನುಗಾರಿಕೆ ಇದೀಗ ಕೊರೋನ ಮಹಾಮಾರಿಯಿಂದ ಉಂಟಾಗಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡು ತೀರ ಸಂಕಷ್ಟಕ್ಕೀಡಾಗಿದ್ದು, ಈ ಸಂದರ್ಭದಲ್ಲಿ ರಾಜ್ಯ ಸರಕಾರ ಮೀನುಗಾರರಿಗೆ ಗರಿಷ್ಟ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ  ಯಶ್‍ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಮೀನುಗಾರಿಕಾ ಋತುವಿನ ಆರಂಭದಲ್ಲಿಯೇ ಜಿಎಸ್‍ಟಿ, ಹವಾಮಾನ ವೈಪರಿತ್ಯದ ಸಮಸ್ಯೆಯಿಂದ ಸುಮಾರು 2 ತಿಂಗಳು ಮೀನುಗಾರಿಕೆ ಹಿನ್ನಡೆ ಅನುಭವಿಸಿದ್ದು, ಆ ಬಳಿಕ ಮತ್ಸಕ್ಷಾಮದಿಂದಾಗಿಯೂ ನಷ್ಟ ಹೊಂದಿದ್ದು, ಇದೀಗ ಈ ಲಾಕ್‍ಡೌನ್‍ನಿಂದಾಗಿ ಮೀನುಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊರೋನ ಪರಿಣಾಮದಿಂದ ಮಾರ್ಚ್ 20 ರಿಂದ ಮೀನುಗಾರಿಕೆ ಸ್ಥಗಿತಗೊಳಿಸಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಜೂನ್ ತಿಂಗಳಿನಿಂದ ಆಗಸ್ಟ್ ವರೆಗೆ ಮೀನುಗಾರಿಕೆ ನಿಷೇಧವಿದ್ದು ಒಟ್ಟಾರೆ ಕರಾವಳಿ ಜಿಲ್ಲೆಯಲ್ಲಿ ಸುಮಾರು 5 ತಿಂಗಳು ಮೀನುಗಾರಿಕೆ ಸಂಪೂರ್ಣ ಸ್ಥಬ್ದಗೊಳ್ಳಲಿದೆ. ಸುಮಾರು 1000 ಕೋಟಿ ನಷ್ಟ ಅನುಭವಿಸಲಿದ್ದು, ಮೀನುಗಾರಿಕೆಯನ್ನೇ ಅವಲಂಬಿಸಿರುವ ಮೀನುಗಾರರು ಆರ್ಥಿಕ ಸಂಕಷ್ಟದಿಂದ ಜೀವನ ನಿರ್ವಹಣೆಗೆ ಹೋರಾಟ ನಡೆಸುವ ಸನ್ನಿವೇಶ ನಿರ್ಮಾಣವಾಗಲಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಸರಕಾರ ಕೂಡಲೇ ಈ ಬಗ್ಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಮುಂದಿನ ಮೀನುಗಾರಿಕಾ ಋತುವಿನಲ್ಲಿ ಮೀನುಗಾರಿಕೆ ನಡೆಸಲು ತೀರ ಕಷ್ಟಸಾಧ್ಯವಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮೀನುಗಾರಿಕೆಯನ್ನೇ ನಂಬಿರುವ 1 ಲಕ್ಷ ಮಂದಿ ಮೀನುಗಾರರ ಹಾಗೂ ಪರೋಕ್ಷವಾಗಿ ಅವಲಂಬಿಸಿರುವ ಸಾವಿರಾರು ಕಾರ್ಮಿಕರು ಬೀದಿಪಾಲಾಗುವ ಭೀತಿ ನಿರ್ಮಾಣವಾಗಿದೆ.
ಈಗಾಗಲೇ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ, ನೇಕಾರರಿಗೆ, ಆಟೋ , ಟ್ಯಾಕ್ಸಿ ಚಾಲಕರಿಗೆ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸುಮಾರು 1610 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸುವುದರ ಮೂಲಕ ಕಾರ್ಮಿಕರ ಹಿತರಕ್ಷಣೆಗೆ ಮಹತ್ವದ ಕ್ರಮಗಳನ್ನು ಕೈಗೊಂಡಿರುವಂತೆ ಮಾನ್ಯ ಮುಖ್ಯಮಂತ್ರಿಬಿ ಎಸ್. ಯಡಿಯೂರಪ್ಪರವರು,  ಈ ಎಲ್ಲಾ ಸಮಸ್ಯೆಗಳ ಗಂಭೀರತೆಯನ್ನು ಪರಿಗಣಿಸಿ ಮೀನುಗಾರರಿಗೆ ಗರಿಷ್ಟ ಪ್ರಮಾಣದ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಮಂಜೂರು ಮಾಡಿ ಆತಂಕಕ್ಕೀಡಾಗಿರುವ ಮೀನುಗಾರರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯಕ್ಕೆ ಮುಂದಾಗಬೇಕು ಹಾಗೂ ಭೂಮಿಯಲ್ಲಿ ಕೃಷಿ ಮಾಡುವ ರೈತರಿಗೆ ಪರಿಹಾರ ನೀಡುವ ಸಂದರ್ಭದಲ್ಲಿ ರೈತರ ಜಮೀನಿನ ಪ್ರಮಾಣವನ್ನು ಮಾನದಂಡವಾಗಿ ಪರಿಗಣಿಸುವ ರೀತಿಯಲ್ಲಿಯೇ, ಸಮುದ್ರದಲ್ಲಿ ರೈತರಂತೆಯೇ ಮೀನುಗಾರಿಕೆ ನಡೆಸುವ ಮೀನುಗಾರರಿಗೂ ಲೈಲ್ಯಾಂಡ್, ಪರ್ಸೀನ್, ನಾಡ ದೋಣಿ, ಟ್ರಾಲ್ ಬೋಟ್‍ಗಳನ್ನು ಪರಿಗಣಿಸಿ ಪರಿಹಾರದ ಮೊತ್ತವನ್ನು ಪಾವತಿಸುವಂತೆ ಮನವಿ ಮಾಡಿದ್ದಾರೆ.