ತ್ರಿಶಾ ವಿದ್ಯಾ ಕಾಲೇಜಿನಲ್ಲಿ ವಾರ್ಷಿಕೋತ್ಸವ ಆಚರಣೆ

ಕಟಪಾಡಿ: ತ್ರಿಶಾ ವಿದ್ಯಾ ಕಾಲೇಜು ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಕಟಪಾಡಿಯ ವಾರ್ಷಿಕೋತ್ಸವ ಸಮಾರಂಭವು ಜುಲೈ 8 ಶನಿವಾರದಂದು ಉಡುಪಿಯ ಹೋಟೆಲ್ ಕಿದಿಯೂರಿನ ಮಾಧವಕೃಷ್ಣ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪದವಿಯನ್ನು ಪಡೆದರೆ ಸಾಲದು, ದೇಶವನ್ನು ಬೆಳೆಸುವ, ದೇಶದ ನಿಯಮವನ್ನು ಪಾಲಿಸುವ ಉತ್ತಮ ಪ್ರಜೆಗಳಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ತ್ರಿಶಾ ಸಂಸ್ಥೆಯ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಲಿತ ಪಾಠವನ್ನು ಮುಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಸಮಸ್ಯೆಗಳಿಗೆ ಸೋತು ಹೆದರಿ ಜೀವನದಲ್ಲಿ ಹಿಂದೆ ಹೋಗಬಾರದು ಎಂದು ಹೇಳಿದರು.

ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೋ. ಗುರುಪ್ರಸಾದ್ ರಾವ್ ಕಾಲೇಜಿನ ವರದಿಯನ್ನು ಮಂಡಿಸಿದರು. ಕಾಲೇಜಿನಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

ಸಿದ್ಧಾಂತ್ ಫೌಂಡೇಶನ್ ನ ಟ್ರಸ್ಟಿ ನಮಿತಾ ಜಿ ಭಟ್, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಇಂದುರೀತಿ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ನಿರೂಪಿಸಿ ವಂದಿಸಿದರು.