ತೇಜಸ್ವಿ ಸೂರ್ಯ ವಿಮಾನ ತುರ್ತು ನಿರ್ಗಮನ ಬಾಗಿಲು ತೆರೆದ ಪ್ರಕರಣ: ಸಹ ಪ್ರಯಾಣಿಕ ಅಣ್ಣಾಮಲೈ ಸ್ಪಷ್ಟನೆ

ಚೆನ್ನೈ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ತುರ್ತು ನಿರ್ಗಮನವನ್ನು ಅನಧಿಕೃತವಾಗಿ ತೆರೆದಿದ್ದಾರೆ ಎನ್ನುವ ಆರೋಪದ ನಂತರ, ಬಿಜೆಪಿ ತಮಿಳುನಾಡು ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ಗುರುವಾರದಂದು ಮೌನ ಮುರಿದು ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಡಿಸೆಂಬರ್ 10 ರಂದು ನಡೆದಿದೆ ಎನ್ನಲಾದ ಘಟನೆಯ ಸಮಯ ವಿಮಾನದಲ್ಲಿ ತೇಜಸ್ವಿ ಸೂರ್ಯ ಅವರ ಪಕ್ಕದಲ್ಲಿ ಕುಳಿತಿದ್ದ ಅಣ್ಣಾಮಲೈ ಅವರು ತಮ್ಮ ಪಕ್ಷದ ಸಹೋದ್ಯೋಗಿ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

ಎಸಿ ವಾಲ್ವ್ ಅನ್ನು ಸರಿಹೊಂದಿಸುವ ಪ್ರಯತ್ನದಲ್ಲಿ ತೇಜಸ್ವಿ ಅವರು ತುರ್ತು ಬಾಗಿಲನ್ನು “ಆಕಸ್ಮಿಕವಾಗಿ ಸ್ಪರ್ಶಿಸಿರಬಹುದು” ಎಂದು ಅಣ್ಣಾಮಲೈ ಹೇಳಿದ್ದಾರೆ. ತುರ್ತು ಬಾಗಿಲು ತನ್ನ ಸ್ಥಾನದಿಂದ ಸ್ವಲ್ಪ ಆಚೀಚೆ ಆಗಿರುವುದನ್ನು ಗಮನಿಸಿದ ತಕ್ಷಣ ತ್ವರಿತವಾಗಿ ಸಿಬ್ಬಂದಿಯನ್ನು ಕರೆದು ಬಾಗಿಲನ್ನು ಸರಿಪಡಿಸಲು ಪ್ರಯತ್ನಿಸಲಾಯಿತು. ತುರ್ತು ನಿರ್ಗಮನ ಬಾಗಿಲನ್ನು ಸರಿಯಾಗಿ ಹಾಕಿದ ಬಳಿಕ ಶಿಷ್ಟಾಚಾರದಂತೆ ವಿಮಾನದ ತಪಾಸಣೆ ಮಾಡುವುದು ಅಗತ್ಯವಾಗಿದ್ದರಿಂದ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ವಿಮಾನವು ಯಾವುದೇ ತೊಂದರೆಗೊಳಗಾಗಿಲ್ಲ ಮತ್ತು ಹಾರಾಡಲು ಸಮರ್ಥವಾಗಿದೆ ಎಂದು ಖಚಿತ ಪಡಿಸಿಕೊಂಡ ಬಳಿಕ ನಿರ್ಗಮಿಸಲಾಯಿತು ಎಂದು ಅಣ್ಣಾಮಲೈ ಘಟನೆಯನ್ನು ವಿವರಿಸಿದ್ದಾರೆ.

ನಡೆದಿರುವ ಘಟನೆಗೆ ತೇಜಸ್ವಿ ಸೂರ್ಯ ಪ್ರಯಾಣಿಕರ ಕ್ಷಮೆ ಕೇಳಿದ್ದರು ಮತ್ತು ವಿಮಾನಯಾನ ಸಂಸ್ಥೆಯ ಶಿಷ್ಟಾಚಾರಕ್ಕನುಗುಣವಾಗಿ ವರದಿ ಅರ್ಜಿಯಲ್ಲಿ ಮಾಹಿತಿಯನ್ನು ಬರೆದಿದ್ದರು ಎಂದು ಅಣ್ಣಾಮಲೈ ಹೇಳಿದ್ದಾರೆ.