ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸ ಚರಿತ್ರೆ ಬರೆದಿದ್ದ ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಪಾತ್ರಕ್ಕೆ ಅಪಘಾತ ಮಾಡಿ ಅನಿರುದ್ದ್ ಪಾತ್ರವನ್ನು ಕೊನೆಗೊಳಿಸಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ. ಆರ್ಯವರ್ಧನ್ ಪಾತ್ರ ನಿರ್ವಹಿಸುತ್ತಿದ್ದ ನಟ ಅನಿರುದ್ದ್ ಅವರನ್ನು ಕ್ಷುಲ್ಲಕ ಕಾರಣಗಳಿಗೆ ಧಾರಾವಾಹಿಯಿಂದ ಹೊರಹಾಕಿದ್ದಲ್ಲದೆ, ಎರಡು ವರ್ಷಗಳ ಕಾಲ ಕಿರುತೆರೆಯಲ್ಲಿ ನಟಿಸದಂತೆ ನಿರ್ಬಂಧವನ್ನೂ ಹೇರಲಾಗಿದೆ.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದಲ್ಲಿ ಮತ್ತೆ ಅನಿರುದ್ದ್ ಕಾಣಿಸಿಕೊಳ್ಳುತ್ತಾರೆ ಎನ್ನುವ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್ ಕಥೆಯಲ್ಲಿ ಬದಲಾವಣೆ ತಂದು ಆ ಪಾತ್ರಕ್ಕೆ ಅಫಘಾತ ಮಾಡಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ.
ಧಾರಾವಾಹಿಗೆ ಮತ್ತೊಬ್ಬ ಹಿರಿಯ ನಟ ಹರೀಶ್ ರಾಜ್ ಸೇರ್ಪಡೆಯಾಗಿದ್ದು, ಆರ್ಯವರ್ಧನ್ ಸಹೋದರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎರಡೂ ಪಾತ್ರಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆರ್ಯವರ್ಧನ್ ಪಾತ್ರಕ್ಕೆ ಅಫಘಾತವಾಗಿದ್ದರೆ, ಹರೀಶ್ ರಾಜ್ ಪಾತ್ರ ಆತ್ಮಹತ್ಯೆ ಮಾಡಿಕೊಂಡಿದೆ. ಆರ್ಯವರ್ಧನ್ ಪಾತ್ರಕ್ಕೆ ತೀವ್ರ ಪೆಟ್ಟಾಗಿದ್ದು, ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದೆ ಎಂದು ತೋರಿಸಲಾಗಿದೆ. ಈ ಮುಖೇನ ಹೊಸ ಮುಖವೊಂದನ್ನು ಆರ್ಯವರ್ಧನ್ ಪಾತ್ರದಲ್ಲಿ ಮುನ್ನೆಲೆಗೆ ತರಲು ಕಥೆಯನ್ನು ಹೆಣೆಯಲಾಗಿದೆ.
ಒಟ್ಟಾರೆಯಾಗಿ ತಂಡದೊಳಗಿನ ಮನಸ್ತಾಪಗಳಿಂದಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ಧಾರಾವಾಹಿಯಲ್ಲಿ ನೆಚ್ಚಿನ ಆರ್ಯವರ್ಧನ್ ಪಾತ್ರಧಾರಿ ಅನಿರುದ್ದ್ ಅವರನ್ನು ಮರಳಿ ನೋಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.