ಉಡುಪಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ; 83ಕ್ಕೂ ಹೆಚ್ಚು ತಂಡಗಳ ಭಾಗಿ

ಉಡುಪಿ: ಮೀನುಗಾರಿಕೆಗೆ ಹೆಸರುವಾಸಿಯಾದ ಉಡುಪಿ ಜಿಲ್ಲೆಯಲ್ಲಿ ಹವ್ಯಾಸಿ ಮೀನುಗಾರರು ಗಾಳ ಹಾಕಿ ಮೀನು ಹಿಡಿಯುವ ವಿಶಿಷ್ಟ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಸಮುದ್ರ ಮೀನುಗಾರಿಕೆಯ ಮೂಲಕ ಸಾವಿರಾರು ಕುಟುಂಬಗಳಿಗೆ ಬದುಕಿನ ಆಧಾರವಾಗಿರುವ ಜಿಲ್ಲೆಯಲ್ಲಿ, ಬೃಹತ್ ಬಲೆಗಳ ಬದಲಿಗೆ ಗಾಳ ಬಳಸಿ ಮೀನು ಹಿಡಿಯುವ ಸ್ಪರ್ಧೆ ಗಮನ ಸೆಳೆಯಿತು. ಸಮುದ್ರ ತೀರದಲ್ಲಿ ನಡೆದ ಸ್ಪರ್ಧೆಯಲ್ಲಿ 83ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.

ಸ್ಪರ್ಧಿಗಳು ಸಮುದ್ರದ ಅಲೆಗಳ ನಡುವೆ ಗಾಳ ಹಾಕಿ ಮೀನು ಬರುವಿಕೆಗಾಗಿ ಕಾದು ಕುಳಿತಿದ್ದರು. ಗಾಳಕ್ಕೆ ಮೀನು ಸಿಕ್ಕ ಪ್ರತಿಯೊಂದು ಕ್ಷಣವೂ ಸ್ಪರ್ಧಿಗಳಲ್ಲಿ ಉತ್ಸಾಹ ಮೂಡಿಸಿತು. ಸಣ್ಣ ಮೀನುಗಳಿಂದ ಹಿಡಿದು ದೊಡ್ಡ ಗಾತ್ರದ ಮೀನುಗಳವರೆಗೆ ಸ್ಪರ್ಧಿಗಳು ಬೇಟೆಯಾಡಿದರು.

ಯಾರು ಮೊದಲು ಮೀನು ಹಿಡಿಯುತ್ತಾರೆ, ಯಾರ ಗಾಳಕ್ಕೆ ದೊಡ್ಡ ಮೀನು ಬೀಳಲಿದೆ ಹಾಗೂ ಪ್ರಥಮ ಬಹುಮಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಸ್ಪರ್ಧೆಯುದ್ದಕ್ಕೂ ಮನೆ ಮಾಡಿತ್ತು. ದೊಡ್ಡ ಗಾತ್ರದ ಮೀನು ಹಿಡಿದವರಿಗೆ ಪ್ರಥಮ ಬಹುಮಾನ ಸೇರಿದಂತೆ ವಿವಿಧ ಬಹುಮಾನಗಳನ್ನು ನೀಡಲಾಯಿತು.

ಸಾಮಾನ್ಯವಾಗಿ ಮೀನುಗಾರರ ಬದುಕಿನ ಭಾಗವಾಗಿರುವ ಮೀನು ಬೇಟೆ, ಈ ಸ್ಪರ್ಧೆಯ ಮೂಲಕ ಹವ್ಯಾಸಿ ಮೀನುಗಾರರಿಗೆ ರೋಚಕ ಅನುಭವವಾಗಿ ಮಾರ್ಪಟ್ಟಿತು. ಸಮುದ್ರದ ಅಲೆಗಳ ನಡುವೆ ನಡೆದ ಈ ವಿಭಿನ್ನ ಪೈಪೋಟಿ ಕರಾವಳಿಯ ಜನರ ಗಮನ ಸೆಳೆಯಿತು.

ಮೀನುಗಾರಿಕೆಯ ನಾಡು ಉಡುಪಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಹವ್ಯಾಸಿ ಮೀನುಗಾರಿಕೆಯ ಮತ್ತೊಂದು ಆಯಾಮವನ್ನು ಪರಿಚಯಿಸಿತು.