ರಂಗಭೂಮಿಯ ಸಾಧಕ “ಅನೀಶ್ ಪ್ರಸಾದ್” ಎಂಬ ಬಾಲಕ : ಅಭಿನಯ ಸೊಗಸುಗಾರ, ಇವನೇ ಎಳೆಯ ಕನಸುಗಾರ

ಇದು”ಬಣ್ಣದ ಕನಸುಗಾರರು” ಸರಣಿಯ ನಾಲ್ಕನೆಯ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ.

ರಂಗಭೂಮಿ ಎಂದಾಕ್ಷಣ ಹಲವು ವಿಷಯಗಳು ನೆನಪಾಗಬಹುದು. ಬಣ್ಣ, ಬೆಳಕು, ಮಾತು, ಧ್ವನಿ, ಸಂಗೀತ, ನಟನೆ, ನೃತ್ಯ..ರಂಗಭೂಮಿಯ ಪ್ರತಿಯೊಬ್ಬನಿಗೂ ಈ ಎಲ್ಲಾ ವಿಷಯಗಳ ಕನಿಷ್ಠ ಪ್ರಜ್ಞೆ ಇರಲೇಬೇಕಾಗುತ್ತದೆ. ರಂಗನಟನೂ ಇದಕ್ಕೆ ಹೊರತಾಗಿಲ್ಲ. ತಾನು ಎಲ್ಲಿ ನಿಲ್ಲಬೇಕು? ಯಾವ ಬೆಳಕಿಗೆ ಒಡ್ಡಿಕೊಳ್ಳಬೇಕು? ಯಾವಾಗ ಮಾತಾಡಬೇಕು? ಎಲ್ಲಿ ಹಾಡಿಗೆ ದನಿಗೂಡಿಸಬೇಕು?  ದೇಹದ ಭಂಗಿ ಹೇಗಿರಬೇಕು? ಇತ್ಯಾದಿಗಳನ್ನು ತಿಳಿದಿರಬೇಕು. ಇದೆಲ್ಲವನ್ನು ಸಾಧಿಸುವುದು ಸುಲಭವಲ್ಲ. ಹೀಗೆ ಸುಲಭವಲ್ಲದ್ದನ್ನೂ ಇಷ್ಟಪಟ್ಟರೆ ಕಲಿತು ಮಾಡಬಹುದು ಎಂದು ತೋರಿಸಿಕೊಟ್ಟ ಬಾಲನಟ ನಮ್ಮ ಇಂದಿನ ಬಣ್ಣದ ಕನಸುಗಾರ ಮಣಿಪಾಲದ ಅನೀಶ್ ಪ್ರಸಾದ್ ಪಾಂಡೇಲು.

ರಂಗಭೂಮಿಯ  ಅಭಿನಯ ಸೊಗಸುಗಾರ, ಎಳೆಯ ಕನಸುಗಾರ  ಇವರು. ರಂಗಭೂಮಿಯ ಅಂಗಳದಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಬೆಳೆಯುತ್ತಿರುವ ಸಿರಿ.

ರಿಂಗಿನಾಟ, ಹಕ್ಕಿಯ ಹಾಡು, ವಾಲಿವಧೆ, ಚೋಮನದುಡಿ, ವೀ ಟೀಚ್ ಲೈಫ್ ಸರ್, ರಕ್ಕಸ ತಂಗಡಿ ಮುಂತಾದ ಸುಮಾರು 10ಕ್ಕೂ ಮೇಲ್ಪಟ್ಟು ನಾಟಕಗಳಲ್ಲಿ ಅಭಿನಯಿಸಿದ ಈ ಕಲಾವಿದ ರಂಗಭೂಮಿಯಲ್ಲಿ ಇನ್ನಷ್ಟು ಬೆಳೆಯುವ ಕನಸು ಕಾಣುತ್ತಲೇ ಇದ್ದಾರೆ.

ಕ್ರಿಯಾಶೀಲ ಬಾಲಕನಿಗೆ ಕಾಡಿತು ನಾಟಕ:

ತಮ್ಮ ನಟನೆಯ ಆರಂಭದ ಬಗ್ಗೆ ಹೇಳುತ್ತಾ, “5ನೇ ತರಗತಿಯಲ್ಲಿರುವಾಗ ಮೊದಲ ಬಾರಿ ನಾಟಕಕ್ಕೆ ಬಣ್ಣ ಹಚ್ಚಿದೆ. ಶಾಲಾ ಮಟ್ಟದಲ್ಲಿ ಪ್ರತಿಭಾ ಕಾರಂಜಿಗಳಲ್ಲಿ ಭಾಗವಹಿಸಿದೆ. ನಂತರ ಆರನೇ ತರಗತಿಯಲ್ಲಿರುವಾಗ ಮಣಿಪಾಲ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿದ್ದ, ‘ಚಿನ್ನಾರಿ ನಾಟಕ ತಂಡ’ವನ್ನು ಸೇರಿದೆ. ಅದಕ್ಕೆ ಅವಕಾಶ ಮಾಡಿಕೊಟ್ಟವರು ಶಾಲೆಯ ಶಿಕ್ಷಕರಾದ ನಾಗೇಂದ್ರ ಪೈ ಹಾಗೂ ರಂಗಕ್ಷೇತ್ರದ ರಾಜು ಮಣಿಪಾಲ. ನನ್ನ ನಾಟಕ ಕ್ಷೇತ್ರದ ಬೆಳವಣಿಗೆಗೆ ಅಡಿಪಾಯ ಹಾಕಿದವರು ಇವರಿಬ್ಬರು ಎಂದು ನೆನಪು ಮಾಡಿಕೊಳ್ಳುತ್ತಾರೆ” ಅನೀಶ್.

“ನಾಟಕದಲ್ಲಿ ಅಭಿನಯಿಸುವುದಕ್ಕೂ ಮೊದಲು ಹಲವಾರು ನಾಟಕಗಳನ್ನು ನೋಡಿದ್ದೆ. ನಾಟಕದ ಪಠ್ಯ, ಪ್ರಸ್ತುತ ಜಾಗತಿಕ ಅಥವಾ ಮನೋರಂಜನೆಯ ವಸ್ತು ವಿಷಯಗಳ ಬಳಕೆ, ಅದನ್ನು ಪ್ರೇಕ್ಷಕರಿಗೆ ಒಪ್ಪಿಸುವ ಬಗೆ ಬಹಳವಾಗಿ ಇಷ್ಟವಾಯಿತು. ಇದು ನಾನು ಒಬ್ಬ ಕಲಾವಿದನಾಗಬೇಕು ಎನ್ನುವುದಕ್ಕೆ ಸ್ಪೂರ್ತಿ” ಎಂದು ಹೇಳುತ್ತಾರೆ ಅನೀಶ್.

ಬೆಳೆಯುತ್ತಿರುವ ಸಿರಿಗೆ ಪುರಸ್ಕಾರಗಳ ಗರಿ:

“ಎಂಟನೆಯ ತರಗತಿಯಲ್ಲಿ ಕಲಿಯುತ್ತಿರುವ ಸಂದರ್ಭ, ‘ಸಂಗಮ ಕಲಾವಿದೆರ್ ಮಣಿಪಾಲ’ ತಂಡಕ್ಕೆ ಸೇರಿಕೊಂಡೆ. ಅಲ್ಲಿ ಮತ್ತಷ್ಟು ನಾಟಕಗಳಲ್ಲಿ ಅಭಿನಯಿಸುವ, ಕಲಿಯುವ ಅವಕಾಶ ಸಿಕ್ಕಿತು. ಶ್ರೀಪಾದ್ ಭಟ್, ಗಣೇಶ್ ಎಮ್ ಮುಂತಾದ ಹಿರಿಯ ನಿರ್ದೇಶಕರ ಮಾರ್ಗದರ್ಶನ ದೊರಕಿತು. ಅವರಿಂದ ರಂಗದ ಬಗ್ಗೆ ಬಹಳಷ್ಟು ಕಲಿತೆ. ಅಭಿನಯಿಸಿದ ಪ್ರತಿಯೊಂದು ನಾಟಕಗಳಲ್ಲಿಯೂ ಪ್ರತಿಯೊಂದು ಪಾತ್ರದಲ್ಲಿಯೂ ಹೊಸತನ್ನು ತಿಳಿಕೊಳ್ಳುತ್ತೇನೆ. ನಾಟಕದ ಬಗ್ಗೆ, ಅಭಿನಯದ ಬಗ್ಗೆ, ಪಾತ್ರಗಳ ಬಗ್ಗೆ, ರಂಗ ಜಗತ್ತಿನ ಹೊಸ ವಿಷಯಗಳ ಬಗ್ಗೆ ಕಲಿಯುತ್ತೇನೆ. ಇದು ಎಂದಿಗೂ ನಾಟಕದ ಆಸಕ್ತಿಯನ್ನು ಉಳಿಸುತ್ತದೆ ಎಂಬ ನಂಬಿಕೆ ನನ್ನದು” ಎನ್ನುವ ಅನೀಶ್, ಶಾಲಾ ದಿನಗಳ ಪ್ರತಿಭಾ ಕಾರಂಜಿಯಲ್ಲಿ ರಾಜ್ಯ ಮಟ್ಟದ ಉತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.

ಎರಡು ಬಾರಿ ರಾಜ್ಯ ಮಟ್ಟದ, ಕೆಮ್ತೂರು ತುಳು ನಾಟಕ ಸ್ಪರ್ಧೆ ‘ತುಳುಕೂಟ’ದಲ್ಲಿ ಉತ್ತಮ ಬಾಲ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇವಲ ನಾಟಕದ ನಟನೆ ಅಲ್ಲದೆ ‘ಸಿದ್ದ – son of sot’ ಮತ್ತು ‘ಡಬಲ್ ಲೈಫ್’ ಎಂಬ ಕಿರುಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಅಪರೂಪಕ್ಕೆ ಕವನಗಳನ್ನು ಬರೆಯುವ ಹವ್ಯಾಸವೂ ಅನೀಶ್ ಅವರದ್ದು.

ಪ್ರಸ್ತುತ ಎಂ‌.ಜಿ.ಎಂ‌. ಕಾಲೇಜಿನಲ್ಲಿ ದ್ವಿತಿಯ ಪಿಯುಸಿ ವಿದ್ಯಾರ್ಥಿಯಾಗಿರುವ ಅನೀಶ್, “ಮುಂದೆ ಇದನ್ನೇ ಮಾಡಬೇಕು ಎಂಬ ಯೋಚನೆ ಇಲ್ಲ. ಅವಕಾಶ ಸಿಕ್ಕರೆ ನಾಟಕಗಳಲ್ಲಿ ಮುಂದೆಯೂ ಅಭಿನಯಿಸುತ್ತಿರುತ್ತೇನೆ” ಎಂದು ಹೇಳುತ್ತಾರೆ. ಅನೀಶ್ ಪ್ರಸಾದ್ ಪಾಂಡೇಲು ಸಂಪರ್ಕ: 81974 68428

ಬರಹ-ಗಣಪತಿ ದಿವಾಣ