ನಟ ವಿಜಯ್ ರಾಜ್ ಕುಮಾರ್ ಅಭಿನಯದ,ಸುಧೀರ್ ಶಾನುಭೋಗ್ ನಿರ್ದೇಶನದ ಸುಂದರ ಜೀವನಪ್ರೀತಿಯ ಕಥಾನಕವುಳ್ಳ “ಅನಂತು vs ನುಸ್ರತ್ ಸಿನಿಮಾ ಇದೀಗ ಎರಡನೆಯ ವಾರವೂ ಭರ್ಜರಿಯಾಗಿ ಓಡುತ್ತಿದೆ. ಕೆ.ಜಿ.ಎಫ್ ಸಿನಿಮಾದ ಅತೀ ಅಬ್ಬರದ ನಡುವೆ ಅನಂತು vs ನುಸ್ರತ್ ಸಿನಿಮಾವನ್ನು ಪ್ರೇಕ್ಷಕ ಕೈ ಹಿಡಿಯುತ್ತಾನಾ? ಎನ್ನುವ ಸಣ್ಣ ಪ್ರಶ್ನೆ ಈ ಹಿಂದೆ ಎಲ್ಲರಲ್ಲೂ ಇತ್ತು, ಆದ್ರೆ ಪ್ರೇಕ್ಷಕನ ಎದೆಯೊಳಗೆ ಅನಂತು, ನುಸ್ರತ್ ರ ತಿಳಿಯಾದ ಮೊಹೊಬತ್ ಸದ್ದಿಲ್ಲದೇನೇ ಹರಿದು ಸುದ್ದಿಯಾಗಿದೆ.
ಅಂದ ಹಾಗೆ ಕರಾವಳಿಯವರಾದ ನಿರ್ದೇಶಕ ಸುಧೀರ್ ಶಾನುಭೋಗ್, ಅವರ ಚೊಚ್ಚಲ ನಿರ್ದೇಶನದ ಈ ಚಿತ್ರದ ಮೇಲೆ ಪೊಸಿಟಿವ್ ಕಾರಣಕ್ಕಾಗಿಯೂ ಪ್ರೇಕ್ಷಕರಿಗೆ ಲವ್ವಾಯಿದೆ. ಅದೇನಂದ್ರೆ ಈ ಚಿತ್ರದಲ್ಲಿ ನಿರ್ದೇಶಕರು ತೋರಿಸಿದ ಸಂಬಂಧ ಹಾಗೂ ಪ್ರೀತಿಯ ದೃಶ್ಯಗಳಿಗೆ ಮನಸೋತ ಪ್ರೇಕ್ಷಕ ತಮ್ಮ ನಿಜ ಜೀವನ, ಸಂಬಂಧದ ಬಗ್ಗೆ ನೆನಪಾಗಿ ದೂರ ಮಾಡಿದ ಹೆಂಡತಿ, ಮಕ್ಕಳ ಮೇಲೆಯೂ ಪ್ರೀತಿ ಸೂಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ನಟನೆ,ಸಂಗೀತವೂ ಚೆಂದ:
ನಾಯಕ ವಿನಯ್ ರಾಜಕುಮಾರ್ ಮತ್ತು ನಾಯಕಿ ಲತಾ ಹೆಗ್ದೆ ನಟನೆ ನಮಗೂ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ, ಕಾರ್ಕಳದ ಯುವ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಸಂಗೀತ ಕೂಡ ಸೂಪರ್ ಎನ್ನುವುದು ಸಿನಿ ರಸಿಕರ ಮಾತು.
ಕರಾವಳಿಯ ಪ್ರೇಕ್ಷಕರ ಡಿಮ್ಯಾಂಡ್:
ಕೆಲವೊಂದು ಕಾರಣಗಳಿಗಾಗಿ ಸಿನಿಮಾ, ಕರಾವಳಿಯ ಮಂಗಳೂರು,ಉಡುಪಿಯ ಚಿತ್ರಮಂದಿರದಲ್ಲಿ ತುಂಬಾ ದಿನ ಉಳಿದಿಲ್ಲ, ಪ್ರೇಕ್ಷಕರು ಸಿನಿಮಾ ಮಂದಿರಕ್ಕೆಹೋದಾಗ ಅಲ್ಲಿ ಸಿನಿಮಾ ಕಾಣೆಯಾಗಿದೆ. ಹಾಗಾಗಿ ಸಿನಿಮಾ ನೋಡಲು ಹೋದ ಪ್ರೇಕ್ಷಕರಿಗೆ ನಿರಾಶೆಯಾಗಿದೆ.ಆದಷ್ಟು ಬೇಗ ಮತ್ತೆ ಮಂಗಳೂರಿನ ಥಿಯೇಟರ್ ಗೆ ಸಿನಿಮಾ ಬರಲಿದೆ ಎನ್ನುತ್ತಾರೆ ನಿರ್ದೇಶಕ ಸುಧಿರ್ ಶಾನುಭೋಗ್
ಹೇಗಿದೆ ಸಿನಿಮಾ :ಉಡುಪಿ x ಪ್ರೆಸ್ ವೀವ್:
ಪ್ರೀತಿಯನ್ನು ಪಾಸಿಟಿವ್ ಕಣ್ಣುಗಳಿಂದ ನೋಡುವ ರೋಚಕತೆಯ ಮಜ ಹೇಗಿರುತ್ತೆಂದು ಹೇಳುವ ಸಿನಿಮವಿದು.
ಸಂಪ್ರದಾಯಸ್ಥ ಮುಸ್ಲಿಂ ಸಮುದಾಯದ, ಅಷ್ಟೇ ಸಂಪ್ರದಾಯಸ್ಥ ಹಿಂದೂ ಕುಟುಂಬದ ಆಚರಣೆಗಳು ಸಿನಿಮಾದಲ್ಲಿದೆ.
ಇಲ್ಲಿ ಪ್ರೀತಿ ಇದೆ, ಕೋಲಾಹಲವಿಲ್ಲ. ಪುಟ್ಟ ಜಗಳವಿದೆ ಆದರೆ ಆ ಎಲ್ಲಾ ಜಗಳಗಳು ಪ್ರೀತಿಯಿಂದಲೇ ಕೊನೆಗೊಳ್ಳುತ್ತದೆ. ಹಿಂದೂ-ಮುಸ್ಲಿಂ ಪಾತ್ರಗಳು ಸಾಮಾನ್ಯವಾಗಿ ಸಿನಿಮಾದಲ್ಲಿದ್ದರೆ ಅಲ್ಲೊಂದು ಕೌಟುಂಬಿಕ ಗದ್ದಲವೋ, ದ್ವೇಷವೋ, ಮತ್ತೊಂದೋ ಇರುತ್ತದೆ. ಆದರೆ ಇಲ್ಲಿ ಅವೆಲ್ಲಾ ಜೀವನಪ್ರೀತಿಯಲ್ಲಿ ಮಿಂದೆದ್ದಿದೆ.
ಸಿನಿಮಾ ಸಂಭಾಷಣೆಯನ್ನು ಸರಿಯಾಗಿ ಕೇಳಿಸಿಕೊಂಡರೆ ನಮ್ಮ ಬದುಕಿಗೆ ಬೇಕಾದ ದೊಡ್ಡದ್ದೊಂದು ಸ್ಪೂರ್ತಿಯೂ ಸಿಕ್ಕಿಬಿಡುತ್ತದೆ. ಕನ್ನಡದ ಮಚ್ಚು-ಲಾಂಗು, ಮರ ಸುತ್ತುವ ಪ್ರೇಮಕತೆಗಳಿಗೆ ಕಪಾಳಕ್ಕೆ ಹೊಡೆಯುವಂತಿರುವ ಈ ಚಿತ್ರ, ತನ್ನ ವಿಭಿನ್ನ ಕಥಾನಕದಿಂದ ಗೆದ್ದಿದೆ.ಇಂತಹ ಚಿತ್ರಗಳು ಜಾಸ್ತಿಯಾಗಲಿ ಎನ್ನುವುದು ನಮ್ಮ ಆಸೆ.