ಅಮೂಲ್ ಐಸ್ ಕ್ರೀಂ ವಾಹನದಲ್ಲಿ‌ ಗೋಕಳ್ಳತನ:  ವಾಹನ ಪೊಲೀಸ್ ವಶ ಆರೋಪಿಗಳು ಪರಾರಿ

ಮಂಗಳೂರು: ಅಮುಲ್ ಐಸ್‌ಕ್ರೀಂ ಎಂಬ ಹೆಸರಿನ ವಾಹನದಲ್ಲಿ ಕೇರಳದ ಕಸಾಯಿಖಾನೆಗೆ ಮೂರು ದನಗಳನ್ನು ಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ.
ವಿಟ್ಲ ಪೊಲೀಸರ ತಂಡ ಮೂರು ದನಗಳನ್ನು ಹಾಗೂ ವಾಹನವನ್ನು ವಿಟ್ಲ ಸಮೀಪದ ಸಾಲೆತ್ತೂರು ಕಟ್ಟತ್ತಿಲ ಬಳಿ ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಸಾಲೆತ್ತೂರು ರಸ್ತೆ ಮೂಲಕ ಕೇರಳದಲ್ಲಿರುವ ಕಸಾಯಿಖಾನೆಗೆ ಮೂರು ದನಗಳನ್ನು ಅಮುಲ್ ಐಸ್‌ಕ್ರೀಂನ ವಾಹನದಲ್ಲಿ ಕೊಂಡೊಯ್ಯಲಾಗುತ್ತಿತ್ತು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಾಲೆತ್ತೂರು ಕಟ್ಟತ್ತಿಲ ಎಂಬಲ್ಲಿ ವಿಟ್ಲ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ತಂಡ ವಾಹನವನ್ನು ಅಡ್ಡಗಟ್ಟಿದ್ದರು. ಚಾಲಕ ವಾಹನವನ್ನು ಮುಂದಕ್ಕೆ ಚಲಾಯಿಸಿ, ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದು, ಬಳಿಕ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ವಾಹನವನ್ನು ಪರಿಶೀಲಿಸಿದಾಗ ಮೂರು ದನಗಳು ಪತ್ತೆಯಾಗಿವೆ.
ಕಳೆದ ಕೆಲವು ದಿನಗಳಿಂದ ಈ ವಾಹನದಲ್ಲಿ ದನಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಅದು ಐಸ್‌ಕ್ರೀಂ ವಾಹನ ಎಂದು ಪೊಲೀಸರು ಹಾಗೂ ಸಾರ್ವಜನಿಕರು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದೀಗ ತಂಡದ ಕೃತ್ಯ ಬಯಲಿಗೆ ಬಂದಿದೆ. ವಿಚಾರಣೆ ವೇಳೆ ಕಳ್ಳತನ ನಡೆಸಿದ ದನಗಳು ಎಂಬುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.