ದೇವಲ್ಕುಂದ ಅಮೋನಿಯಾ ಸೋರಿಕೆ ಪ್ರಕರಣ: ಪೈಪ್‌ನೊಳಗಿರುವ ಅಮೋನಿಯಾ ಸೋರಿಕೆ :ತನಿಖೆಯಲ್ಲಿ ಬಹಿರಂಗ

ಕುಂದಾಪುರ: ತಾಲೂಕಿನ ದೇವಲ್ಕುಂದ ಸಮೀಪದ ಮೀನು ಶಿತಲೀಕರಣ ಘಟಕದಲ್ಲಿ ಸೋಮವಾರ ಸಂಭವಿಸಿದ ಅಮೋನಿಯಾ ಸೋರಿಕೆ ಪ್ರಕರಣದ ತನಿಖೆ ಇದೀಗ ಚುರುಕುಗೊಂಡಿದ್ದು, ಸ್ಥಳಕ್ಕೆ ಸಹಾಯಕ ಆಯುಕ್ತ ಡಾ.ಮಧುಕೇಶ್ವರ್ ನೇತೃತ್ವದ ತನಿಖಾ ತಂಡ ಭೇಟಿ ನೀಡಿ ಮಹತ್ತರವಾದ ಮಾಹಿತಿಗಳನ್ನು ಕಲೆಹಾಕಿದೆ.

ಬುಧವಾರ ಬೆಳಿಗ್ಗೆ ಇಲ್ಲಿನ  ದೇವಲ್ಕುಂದದಲ್ಲಿರುವ ಮಲ್ಪೆ ಫ್ರೆಶ್ ಮರೈನ್ ಮೀನು ಶಿತಲೀಕರಣ ಘಟಕಕ್ಕೆ ಭೇಟಿ ನೀಡಿದ ತನಿಖಾ ತಂಡ ಶಿತಲೀಕರಣ ಘಟಕಕ್ಕೆ ಮೆಶೀನ್ ಸರಬರಾಜು ಮಾಡಿರುವ ಕಂಪೆನಿ ಅಧಿಕಾರಿಗಳು, ಘಟಕದ ಮಾಲೀಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿ ಹಲವಾರು ಮಾಹಿತಿಗಳನ್ನು ಪಡೆದುಕೊಂಡಿದೆ.

ಅಮೋನಿಯಾ ಸೋರಿಕೆಯಾದ ಹಿನ್ನೆಲೆಯಲ್ಲಿ ಮೀನು ಶಿತಲೀಕರಣ ಘಟಕದ ಫ್ರೀಝಿಂಗ್, ಪ್ಯಾಕಿಂಗ್ ವಿಭಾಗ, ಅಮೋನಿಯಾ ಸೋರಿಕೆಯಾದ ಫ್ರೀಝರ್ ವಿಭಾಗ, ಮಹಿಳಾ ಕಾರ್ಮಿಕರು ಕೆಲಸ ನಿರ್ವಹಿಸುವ ಕೊಠಡಿ, ಮಹಿಳಾ ಹಾಗೂ ಪುರುಷ ಕಾರ್ಮಿಕರ ಹಾಸ್ಟೇಲ್ ಹಾಗೂ ಇನ್ನಿತರ ಯಂತ್ರೋಪಕರಣಗಳ ಕುರಿತು ಸಂಬಂಧಪಟ್ಟವರಿಂದ ಮಾಹಿತಿ ಪಡೆದುಕೊಂಡಿದ್ದು, ಘಟಕದ ಎಲ್ಲಾ ವಿಭಾಗಗಳನ್ನು ಸ್ವತಃ ಡಾ. ಮಧುಕೇಶ್ವರ್ ಪರಿಶೀಲನೆ ನಡೆಸಿದರು.

ಯಂತ್ರಗಳ ನಿರ್ವಹಣೆ ಕೊರತೆ:
ಮೀನು ಶಿತಲೀಕರಣ ಘಟಕಕ್ಕೆ ಯಂತ್ರಗಳನ್ನು ಸರಬರಾಜು ಮಾಡಿರುವ ಕಂಪೆನಿ ಅಧಿಕಾರಿಗಳು ಯಂತ್ರಗಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ನೀಡಿದರು. ಅಲ್ಲದೇ ಘಟಕದಲ್ಲಿ ಕೆಲಸ ನಿರ್ವಹಿಸುವ ತಂತ್ರಜ್ಞರೊಂದಿಗೂ ಮಾತುಕತೆ ನಡೆಸಿದ ಡಾ. ಮಧುಕೇಶ್ವರ್ ಅವರಿಗೆ ಘಟಕದಲ್ಲಿ ಯಂತ್ರಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಮಹತ್ತರವಾದ ಅಂಶ ಗಮನಕ್ಕೆ ಬಂದಿದೆ. ಅಗ್ನಿ ಅವಘಡ ಹಾಗೂ ಇನ್ನಿತರ ಅವಘಡಗಳು ನಡೆದಾಗ ತುರ್ತು ಸಂದರ್ಭಗಳಲ್ಲಿ ಅಳವಡಿಸಬೇಕಾದ ಯಾವುದೇ ಮುಂಜಾಗೃತ ಕ್ರಮಗಳನ್ನು ಕಂಪೆನಿ ಮಾಡಿಕೊಳ್ಳದಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಪೈಪ್‌ನೊಳಗಿರುವ ಅಮೋನಿಯಾ ಸೋರಿಕೆ:
೮,೦೦೦ ಕೆಜಿಯಷ್ಟು ಪ್ರಮಾಣ ಇರುವ ಗಾಸ್ ಟ್ಯಾಂಕರ್ ಅಳವಡಿಸಲಾಗಿದ್ದು, ೧,೫೦೦ ಕೆಜಿಯಷ್ಟು ಗ್ಯಾಸ್ ಪೈಪ್‌ನೊಳಗಿರುತ್ತದೆ. ಅನಾಹುತ ನಡೆದ ವೇಳೆಯಲ್ಲಿ ಯಂತ್ರಗಳನ್ನು ಚಾಲನೆ ಮಾಡುವ ಸಿಬ್ಬಂದಿ ಮುಖ್ಯ ವಾಲ್ ಅನ್ನು ಬಂದ್ ಮಾಡಿದ್ದು, ಬಳಿಕ ಉಳಿದ ಎಂಟು ವಾಲ್‌ಗಳನ್ನು ಬಂದ್ ಮಾಡಿದ್ದಾರೆ. ಆದರೂ ಸಾಕಷ್ಟು ಪ್ರಮಾಣದ ಅಮೋನಿಯಾ ಪೈಪ್‌ನೊಳಗಿರುವುದರಿಂದ ಅನಾಹುತಕ್ಕೆ ದಾರಿಯಾಗಿದೆ ಎಂಬುವುದು ತನಿಖಾ ವೇಳೆಯಲ್ಲಿ ತಿಳಿದು ಬಂದಿದೆ.