ಹೊಸ ಭಯೋತ್ಪಾದಕ ಗುಂಪುಗಳು ರಚನೆಯಾಗದಂತಹ ಕಾರ್ಯವಿಧಾನ ಅನುಸರಿಸಿ: ಏಜೆನ್ಸಿಗಳಿಗೆ ಅಮಿತ್ ಶಾ ಕರೆ

ನವದೆಹಲಿ: ಹೊಸ ಭಯೋತ್ಪಾದಕ ಗುಂಪುಗಳು ರಚನೆಯಾಗದಂತೆ ಎಲ್ಲಾ ಭಯೋತ್ಪಾದನಾ ವಿರೋಧಿ ಏಜೆನ್ಸಿಗಳು ಕಠಿಣ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.

ಗುರುವಾರ ನವದೆಹಲಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಯೋಜಿಸಿದ್ದ ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ದೃಢವಾಗಿ ನಿಗ್ರಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳು ಯಶಸ್ವಿಯಾಗಿದೆ. ಎನ್‌ಐಎ ವ್ಯಾಪ್ತಿಯಲ್ಲಿ ಮಾದರಿ ಭಯೋತ್ಪಾದನೆ ನಿಗ್ರಹ ರಚನೆಯನ್ನು ಸ್ಥಾಪಿಸಬೇಕು ಎಂದು ಅವರು ಹೇಳಿದರು.

ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳ ನಡುವೆ ಉತ್ತಮ ಸಮನ್ವಯಕ್ಕಾಗಿ ಎಲ್ಲಾ ರಾಜ್ಯಗಳಲ್ಲಿನ ಎಲ್ಲಾ ಭಯೋತ್ಪಾದನಾ ವಿರೋಧಿ ಏಜೆನ್ಸಿಗಳ ತನಿಖೆಯ ಕ್ರಮಾನುಗತ, ರಚನೆ ಮತ್ತು ಎಸ್.ಒ.ಪಿ ಗಳನ್ನು ಏಕರೂಪಗೊಳಿಸಬೇಕು ಎಂದರು.

ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಜಾಗತಿಕ ಮಟ್ಟದಿಂದ ತಳಮಟ್ಟದವರೆಗೆ, ದೇಶದ ವಿವಿಧ ರಾಜ್ಯಗಳನ್ನು ಒಳಗೊಂಡಂತೆ ಮತ್ತು ಅಂತರರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದು ಅವರು ಹೇಳಿದರು.

ಕೇಂದ್ರ ಮತ್ತು ರಾಜ್ಯದ ಎಲ್ಲಾ ಏಜೆನ್ಸಿಗಳು ಡೇಟಾಬೇಸ್‌ನ ಬಹು ಆಯಾಮದ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಬಳಕೆಯನ್ನು ಮಾಡಬೇಕು ಆಗ ಮಾತ್ರ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಿಗುತ್ತದೆ. ತನಿಖೆ, ಕಾನೂನು ಕ್ರಮ, ತಡೆಗಟ್ಟುವಿಕೆ ಮತ್ತು ಕ್ರಮಕ್ಕಾಗಿ ಡೇಟಾಬೇಸ್ ಅನ್ನು ಬಳಸಬೇಕು ಎಂದು ಅವರು ಹೇಳಿದರು. ಪ್ರತಿ ಪೊಲೀಸ್ ಠಾಣೆ ಹಾಗೂ ಯುವ ಪೊಲೀಸ್ ಅಧಿಕಾರಿಗಳು ಡೇಟಾಬೇಸ್‌ನ ಗರಿಷ್ಠ ಬಳಕೆ ಮಾಡಿಕೊಳ್ಳುವಂತೆ ಗೃಹ ಸಚಿವರು ಒತ್ತಾಯಿಸಿದರು.

ಹೊಸ ಭಯೋತ್ಪಾದಕ ಸಂಘಟನೆ ರಚನೆಯಾಗದಂತೆ ಎಲ್ಲಾ ಭಯೋತ್ಪಾದನಾ ವಿರೋಧಿ ಏಜೆನ್ಸಿಗಳು ಕಠಿಣ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು. ಎನ್‌ಐಎ, ಎಟಿಎಸ್ ಮತ್ತು ಎಸ್‌ಟಿಎಫ್‌ನ ಕಾರ್ಯವು ಕೇವಲ ತನಿಖೆಗೆ ಸೀಮಿತವಾಗದೆ ಅವರು ತಾರ್ಕಿಕವಾಗಿ ಯೋಚಿಸಬೇಕು ಮತ್ತು ಭಯೋತ್ಪಾದನೆಯನ್ನು ಎದುರಿಸಲು ವಿನೂತನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಗೃಹಸಚಿವಾಲಯ ಪ್ರಕಟಣೆ ತಿಳಿಸಿದೆ.