ಹೊಸ ಮ್ಯೂಚುವಲ್ ಫಂಡ್​ ಕಂಪನಿ ಆರಂಭಿಸಿದ ಅಂಬಾನಿ : ಜಿಯೋ ಬ್ಲ್ಯಾಕ್‌ರಾಕ್

ಮುಂಬೈ: ಭಾರತದಲ್ಲಿ ಲಕ್ಷಾಂತರ ಹೂಡಿಕೆದಾರರಿಗೆ ತಂತ್ರಜ್ಞಾನ ಆಧರಿತ ಕೈಗೆಟುಕುವ, ನವೀನ ಹೂಡಿಕೆ ವಿಧಾನಗಳನ್ನು ಜಿಯೋ ಬ್ಲ್ಯಾಕ್‌ರಾಕ್ ನೀಡಲಿದೆ ಎಂದು ಬ್ಲ್ಯಾಕ್‌ರಾಕ್‌ ಮತ್ತು ಜಿಯೋ ಫೈನಾನ್ಷಿಯಲ್​ನ ಜಂಟಿ ಉದ್ಯಮವಾಗಿರುವ ಜಿಯೋ ಬ್ಲ್ಯಾಕ್‌ರಾಕ್​ನ ಹೇಳಿಕೆ ತಿಳಿಸಿದೆ.ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ ವಿಭಜನೆಗೊಂಡ, ಹಣಕಾಸು ಸಾಲ ನೀಡುವ ಕಂಪನಿ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಮತ್ತು ವಿಶ್ವದ ಅತಿದೊಡ್ಡ ಅಸೆಟ್ ಮ್ಯಾನೇಜಮೆಂಟ್​ ಕಂಪನಿ ಬ್ಲ್ಯಾಕ್‌ರಾಕ್ ಎರಡೂ ಒಟ್ಟಾಗಿ ಸೇರಿ 300 ಮಿಲಿಯನ್ ಡಾಲರ್ ಸಂಯೋಜಿತ ಹೂಡಿಕೆಯೊಂದಿಗೆ ಹೊಸ ಅಸೆಟ್ ಮ್ಯಾನೇಜಮೆಂಟ್​ ಕಂಪನಿ ಅಥವಾ ಮ್ಯೂಚುವಲ್ ಫಂಡ್​ ಕಂಪನಿ ಜಿಯೋ ಬ್ಲ್ಯಾಕ್‌ರಾಕ್ ಅನ್ನು ಆರಂಭಿಸಿವೆ.
ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮತ್ತೆ ಹೊಸ ಉದ್ಯಮವೊಂದಕ್ಕೆ ಮುನ್ನುಡಿ ಹಾಕಿದ್ದಾರೆ. ಅಮೆರಿಕದ ಬ್ಲ್ಯಾಕ್​ರಾಕ್​​ನೊಂದಿಗೆ ಸೇರಿ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಹೊಸ ಮ್ಯೂಚುವಲ್ ಫಂಡ್ ಕಂಪನಿಯನ್ನು ಆರಂಭಿಸಿದೆ.

ಇಬ್ಬರೂ ಪಾಲುದಾರರು ಜಂಟಿ ಉದ್ಯಮದಲ್ಲಿ ತಲಾ 150 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದ್ದಾರೆ. ಇದು ಪ್ರಸ್ತುತ ಎಸ್‌ಬಿಐ ಮ್ಯೂಚುಯಲ್ ಫಂಡ್, ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುಯಲ್ ಫಂಡ್ ಮತ್ತು ಎಚ್‌ಡಿಎಫ್‌ಸಿ ಮ್ಯೂಚುಯಲ್ ಫಂಡ್‌ನಿಂದ ಪ್ರಾಬಲ್ಯ ಹೊಂದಿರುವ 44.39 ಟ್ರಿಲಿಯನ್ ಭಾರತೀಯ ಮ್ಯೂಚುಯಲ್ ಫಂಡ್ ಉದ್ಯಮದಲ್ಲಿನ 44 ನೇ ಕಂಪನಿಯಾಗಲಿದೆ.

ನಿಯಂತ್ರಕ ಮತ್ತು ಕಾನೂನು ಬದ್ಧ ಅನುಮೋದನೆಗಳು ಸಿಕ್ಕ ನಂತರ ಜಿಯೋ ಬ್ಲ್ಯಾಕ್​ರಾಕ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಕಂಪನಿಯು ತನ್ನದೇ ಆದ ನಿರ್ವಹಣಾ ತಂಡವನ್ನು ಹೊಂದಿರುತ್ತದೆ. ಜಿಯೋ ಬ್ಲ್ಯಾಕ್​ರಾಕ್ ಹೂಡಿಕೆ ನಿರ್ವಹಣೆ, ಅಪಾಯ ನಿರ್ವಹಣೆ, ಉತ್ಪನ್ನ ಶ್ರೇಷ್ಠತೆ ಮತ್ತು ತಂತ್ರಜ್ಞಾನ, ಕಾರ್ಯಾಚರಣೆಗಳು, ಪ್ರಮಾಣ ಮತ್ತು ಬೌದ್ಧಿಕ ಬಂಡವಾಳದ ವಿಷಯದಲ್ಲಿ ಬ್ಲ್ಯಾಕ್​ರಾಕ್​ನ ಆಳವಾದ ಪರಿಣತಿ ಮತ್ತು ಪ್ರತಿಭೆಯನ್ನು ಸೂಕ್ತವಾಗಿ ಬಳಸಿಕೊಳ್ಳಲಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಏನೆಂದರೆ, ಇದು ಭಾರತೀಯ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಬ್ಲ್ಯಾಕ್‌ರಾಕ್‌ನ ಎರಡನೇ ಪ್ರಯತ್ನವಾಗಿದೆ. ಶೇಕಡಾ 40 ಇಕ್ವಿಟಿಯೊಂದಿಗೆ ಅಲ್ಪಸಂಖ್ಯಾತ ಪಾಲುದಾರರಾಗಿರುವುದರಿಂದ ವ್ಯವಹಾರವನ್ನು ತನ್ನ ವೇದಿಕೆಯಲ್ಲಿ ಸಂಯೋಜಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕಾಗಿ 2018 ರಲ್ಲಿ DSP ಬ್ಲ್ಯಾಕ್‌ರಾಕ್ ಇನ್ವೆಸ್ಟ್‌ಮೆಂಟ್ ಮ್ಯಾನೇಜರ್ಸ್ ಎಂದು ಕರೆಯಲ್ಪಡುವ DSP ಯೊಂದಿಗಿನ ವ್ಯವಹಾರದಿಂದ ಅದು ಹೊರಬಂದಿತ್ತು.ಇದು ಭಾರತೀಯ ಮ್ಯೂಚುವಲ್ ಫಂಡ್ ಮಾರುಕಟ್ಟೆಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದರು. ಜಿಯೋದ ತಾಂತ್ರಿಕ ಜ್ಞಾನ ಮತ್ತು ಬೃಹತ್ ಗ್ರಾಹಕರ ಸಂಖ್ಯೆಯ ಜೊತೆಗೆ ಬ್ಲ್ಯಾಕ್‌ರಾಕ್‌ನ ಫಂಡ್ ಹೌಸ್ ಆಗಿ ಸಾಬೀತಾಗಿರುವ ಜಾಗತಿಕ ಪ್ರತಿಷ್ಠೆಯು ಉದ್ಯಮದ ಕ್ರಿಯಾತ್ಮಕತೆಯನ್ನು ಬದಲಾಯಿಸಬಹುದು. ಜಂಟಿ ಉದ್ಯಮ ಕಾರ್ಯಾರಂಭ ಮಾಡಲು 12 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಆದಾಗ್ಯೂ ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾದ ಅಧ್ಯಕ್ಷರಾದ ಎ.ಬಾಲಸುಬ್ರಮಣಿಯನ್ ಅವರು ಮಾರುಕಟ್ಟೆಯಲ್ಲಿ ಮತ್ತೊಂದು ಮ್ಯೂಚುವಲ್ ಫಂಡ್ ಕಂಪನಿ ಪ್ರವೇಶಿಸುತ್ತಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮ್ಯೂಚುವಲ್ ಫಂಡ್ ಉದ್ಯಮವು ಉತ್ಪನ್ನಗಳನ್ನು ಮಾರಾಟ ಮಾಡುವುದಲ್ಲ, ಬದಲಾಗಿ ಹೂಡಿಕೆದಾರರಿಗೆ ರಿಟರ್ನ್ಸ್ ನೀಡುವುದಾಗಿರುತ್ತದೆ ಮತ್ತು ನಿಧಿಯ ಯಶಸ್ಸು ಆ ಮಾನದಂಡದ ಮೇಲೆಯೇ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು