ಅಮಾಸೆಬೈಲು: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಟಾಟಾ ಸುಮೋ ಕಾರೊಂದನ್ನು ಅಡ್ಡಹಾಕಿದ ಪೊಲೀಸರು ಓರ್ವ ಆರೋಪಿ ಬಂಧಿಸಿ, ನಾಲ್ಕು ಜಾನುವಾರಗಳನ್ನು ರಕ್ಷಣೆ ಮಾಡಿದ ಘಟನೆ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ರಟ್ಟಾಡಿ ರಟ್ಟೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಭಟ್ಕಳ ನಿವಾಸಿ ಜಿಶಾಂತ್ ಬಂಧಿತ ಆರೋಪಿ. ಅಮಾಸೆಬೈಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಅನಿಲ್ ಕುಮಾರ್ ಟಿ.ಎನ್. ಅವರು ಅ. 27 ರಂದು ರಾತ್ರಿ ರೌಂಡ್ಸ್ ನಲ್ಲಿ ಇದ್ದಂತಹ ಸಂದರ್ಭದಲ್ಲಿ ರಟ್ಟಾಡಿ ಕಡೆಯಿಂದ ಅಮಾಸೆಬೈಲು ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಟಾಟಾ ಸುಮೋ ಮತ್ತು ಬೈಕ್ ವೊಂದನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆಗ ಮೂರು ಮಂದಿ ಆರೋಪಿಗಳು ವಾಹನವನ್ನು ನಿಲ್ಲಿಸಿ ಓಡಿ ಹೋಗಿದ್ದು, ಸುಮೋದಲ್ಲಿದ್ದ ಜಿಶಾಂತ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಸುಮೋವನ್ನು ತಪಾಸಣೆ ಮಾಡಿದಾಗ ಹಿಂದುಗಡೆ ಸೀಟನ್ನು ಕಳಚಿ ಪ್ಲಾಸ್ಟಿಕ್ ಟರ್ಪಾಲು ಹಾಸಿ ಅದರಲ್ಲಿ ನಾಲ್ಕು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಿದ್ದರು. ಅದರಲ್ಲಿ ಮೂರು ಗಂಡು ಕರು ಹಾಗೂ ಒಂದು ಹೆಣ್ಣು ದನ ಪತ್ತೆಯಾಗಿದೆ.
ರಟ್ಟಾಡಿ ಪರಿಸರದ ರಸ್ತೆ ಬದಿಗಳಲ್ಲಿ ಮೇಯುತ್ತಿದ್ದ ಈ ಜಾನುವಾರಗಳನ್ನು ಆರೋಪಿಗಳು ಕಳವು ಮಾಡಿಕೊಂಡು, ಭಟ್ಕಳದ ಕಾಸಾಯಿಖಾನೆಗೆ ಕೊಂಡು ಹೋಗುತ್ತಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ.
ಪರಾರಿಯಾದ ಆರೋಪಿಗಳನ್ನು ಅನ್ನಾನ್, ಸುಫಿಯಾನ್ ಹಾಗೂ ಮಹಮದ್ ಹುಸೇನ್ ಎಂದು ಗುರುತಿಸಲಾಗಿದೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












