ಅಮಾಸೆಬೈಲು: ಕೌಟುಂಬಿಕ ವೈಮನಸ್ಸಿನ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೇಡಿಮನೆ ಗ್ರಾಮದಲ್ಲಿ ಸೆ.29ರಂದು ನಡೆದಿದೆ.
ಮೃತರನ್ನು ಶೇಡಿಮನೆ ಗ್ರಾಮದ ಮಾಲಿನಿ (27) ಎಂದು ಗುರುತಿಸಲಾಗಿದೆ. ಈ ಕುರಿತು ಮೃತರ ತಾಯಿ ಜಲಜಾ ಪೂಜಾರಿ (53) ಅವರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜಲಜಾ ಪೂಜಾರಿ ಅವರು ಸೀತಾನದಿ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಸೆ.29ರಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಸುಮಾರು 3.15ರ ವೇಳೆಗೆ ಮನೆಯ ಸಮೀಪದ ವ್ಯಕ್ತಿಯೊಬ್ಬರು ಕಾರ್ಖಾನೆಯ ರೈಟರ್‌ಗೆ ಕರೆ ಮಾಡಿ ಮನೆಯಲ್ಲಿ ಮಕ್ಕಳಿಗೆ ಹುಷಾರಿಲ್ಲ, ಕೂಡಲೇ ಮನೆಗೆ ಬರುವಂತೆ ತಿಳಿಸಿದ್ದರು.
ಬಳಿಕ ಜಲಜಾ ಅವರು ಸಂಜೆ 4 ಗಂಟೆ ಸುಮಾರಿಗೆ ಮನೆಗೆ ಆಗಮಿಸಿದಾಗ ಮನೆಯ ಎದುರು ಸ್ಥಳೀಯರು ಸೇರಿರುವುದು ಕಂಡುಬಂದಿದೆ.
ಮನೆಯೊಳಗೆ ತೆರಳಿ ನೋಡಿದಾಗ ಮಗಳು ಮಾಲಿನಿಯನ್ನು ಕೋಣೆಯ ಬಾಗಿಲಿನಿಂದ ಹೊರಗೆ ಎಳೆದು ತಂದು ಮಲಗಿಸಿರುವುದು ಕಂಡುಬಂದಿದ್ದು, ಒಂದು ಕಾಲು ಕೋಣೆಯ ದಾರಂದದ ಮೇಲಿದ್ದುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳೀಯರಿಂದ ವಿಚಾರಿಸಿದಾಗ, ಮಧ್ಯಾಹ್ನ 1.45ರಿಂದ 2.30ರ ನಡುವಿನ ಅವಧಿಯಲ್ಲಿ ಮಾಲಿನಿ ಕೋಣೆಯಲ್ಲಿದ್ದ ಅಡ್ಡ ಎಳೆಗೆ ನೈಲಾನ್ ಸೀರೆಯಿಂದ ನೇಣು ಬಿಗಿದುಕೊಂಡಿದ್ದರು ಎಂದು ತಿಳಿದುಬಂದಿದೆ.
ಆ ವೇಳೆ ಮನೆಯಲ್ಲಿದ್ದ ಅಳಿಯನ ಸ್ನೇಹಿತೆ ಪ್ರೇಮಲತಾ (28), ಕಾರ್ಕಳ ಎಂಬವರು ಮನೆಯ ಮುಂಭಾಗದ ಹಾಗೂ ಕೋಣೆಯ ಬಾಗಿಲಿಗೆ ಚಿಲಕ ಹಾಕಿದ್ದನ್ನು ಗಮನಿಸಿ, ಮನೆಯ ಹಂಚಿನ ಮೇಲೆ ಹತ್ತಿ ಕೋಣೆಯ ಮೇಲ್ಛಾವಣಿಯ ಮೂರು ಹಂಚುಗಳನ್ನು ತೆಗೆದು ಒಳಗೆ ಇಳಿದು ಮಾಲಿನಿಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಹೊರಗೆ ತಂದು ಬದುಕಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಮಾಲಿನಿ ಹಾಗೂ ಅವರ ಪತಿ ಸುಮಾರು ಎಂಟು ವರ್ಷಗಳಿಂದ ವೈವಾಹಿಕ ಜೀವನ ನಡೆಸುತ್ತಿದ್ದರು. ವೈವಾಹಿಕ ಜೀವನದಲ್ಲಿನ ವೈಮನಸ್ಸಿನಿಂದ ಮನನೊಂದು ಮಾಲಿನಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡುಬಂದರೂ, ಘಟನೆ ನಡೆದ ವೇಳೆ ಮನೆಯಲ್ಲಿ ಮಾಲಿನಿ, ಅವರ ಮಕ್ಕಳು ಹಾಗೂ ಅಳಿಯನ ಸ್ನೇಹಿತೆ ಪ್ರೇಮಲತಾ ಮಾತ್ರ ಇದ್ದ ಕಾರಣ ಮಗಳ ಸಾವಿನ ಬಗ್ಗೆ ಸಂಶಯವಿದೆ ಎಂದು ಜಲಜಾ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 10/2026ರಂತೆ BNSS ಕಲಂ 194(4) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ















