ಆಳ್ವಾಸ್‌ ಕಾಲೇಜಿಗೆ ನ್ಯಾಕ್‌ ‘ಎ’ ಗ್ರೇಡ್‌ ಮಾನ್ಯತೆ; ಸಂಶೋಧನಾ ಕಾರ್ಯಗಳಿಗೆ ಸಹಕಾರಿ: ಮೋಹನ್ ಆಳ್ವ

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್‌ ಕಾಲೇಜಿಗೆ ಯುಜಿಸಿ ‘ನ್ಯಾಕ್‌’ ಸಂಸ್ಥೆಯು ‘ಎ’ ಗ್ರೇಡ್‌ ಮಾನ್ಯತೆ ನೀಡಿದ್ದು, ಹೊಸ ಮಾನ್ಯತಾ ಕ್ರಮ ದಲ್ಲಿ ಸಿಜಿಪಿಎ 3.23 ಪಡೆದಿದೆ.‌ ಈ ಮಾನ್ಯತೆ 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ‘ಎ’ ಗ್ರೇಡ್‌ ಮಾನ್ಯತೆಯಿಂದ ಸಂಶೋಧನಾ ಕಾರ್ಯಗಳಿಗೆ ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 21 ವರ್ಷಗಳ ಹಿಂದೆ 28 ವಿದ್ಯಾರ್ಥಿ ಗಳು, 2 ಕೋರ್ಸ್ನಿಂದ ಪ್ರಾರಂಭವಾದ ಆಳ್ವಾಸ್‌ ಸಂಸ್ಥೆ ಈಗ 18 ಪದವಿ, 22 ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಹೊಂದಿದೆ.‌ ಮಂಗಳೂರು ವಿವಿಯ 210 ಕಾಲೇಜುಗಳ ಪೈಕಿ ಗರಿಷ್ಠ 4,260 ವಿದ್ಯಾರ್ಥಿಗಳನ್ನು ಹೊಂದಿದೆ ಎಂದರು.
ಎ ಗ್ರೇಡ್ ನಿಂದಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಯಲ್ಲಿ ತೊಡಗಿಸಲು ಅವಕಾಶವಾಗಲಿದೆ. ಮಾತ್ರವಲ್ಲದೆ ವಿಶ್ವದ ಪ್ರಮುಖ ಸಂಸ್ಥೆಗಳೊಂದಿಗೆ ಶೈಕ್ಷಣಿಕ-ಔದ್ಯಮಿಕ ಒಡಂಬಡಿಕೆಗಳನ್ನು ಮಾಡಿಕೊಳ್ಳಬಹುದು. ಇದರಿಂದ ಉದ್ಯೋಗವಕಾಶಗಳಿಗೆ ಸಹಕಾರಿಯಾಗಲಿದೆ ಎಂದರು.
ಸಂಸ್ಥೆಯ ಪಠ್ಯಕ್ರಮ, ಶೈಕ್ಷಣಿಕ ಚಟುವಟಿಕೆ, ಸಂಶೋಧನೆ, ವಿಸ್ತರಣಾ ಕಾರ್ಯಕ್ರಮಗಳು, ಮೂಲ ಸೌಕರ್ಯಗಳು, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿ ಸರ್ವತೋಮುಖ ಅಭಿವೃದ್ಧಿ, ಆಡಳಿತ, ನಾಯಕತ್ವ, ನಿರ್ವಹಣೆ ಹಾಗೂ ವ್ಯಕ್ತಿಗತ ಮೌಲ್ಯಗಳು ಮತ್ತು ಅತ್ಯುತ್ತಮ ಕೆಲಸಗಳನ್ನು ಮೌಲ್ಯಮಾಪನ ಮಾಡಿ ಮಾನ್ಯತೆ ಎರಡನೆಯ ಅವಧಿಗೆ ನೀಡಲಾಗಿದೆ.
ಜತೆಗೆ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಹಾಗೂ ಬುಡಕಟ್ಟು ಮತ್ತು ವಿಶೇಷ ಮಕ್ಕಳಿಗಾಗಿ ದತ್ತು ಸ್ವೀಕಾರ, ಸಿಎ, ಸಿಎಸ್‌, ಸಿಪಿಟಿ, ಕ್ಯಾಟ್, ಬ್ಯಾಂಕಿಂಗ್‌, ಐಪಿಸಿಸಿ ಇತ್ಯಾದಿ ವೃತ್ತಿಪರ ಅಲ್ಲದೆ ಹಲವು ಆಡಳಿತ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಮೂಲಕ ದೂರದೃಷ್ಟಿ, ಬದ್ಧತೆ, ಆಡಳಿತಾತ್ಮಕವಾಗಿ ತೊಡಗಿಸಿ ಕೊಳ್ಳು ವಿಕೆ ಇತ್ಯಾದಿ ಕಾರಣಗಳು ‘ನ್ಯಾಕ್‌’ ಮನ್ನಣೆಗೆ ಪೂರಕವಾಗಿವೆ ಎಂದು ಅವರು ತಿಳಿಸಿದರು.
ಪ್ರಾಚಾರ್ಯ ಡಾ| ಕುರಿಯನ್‌, ಸಂಯೋಜಕಿ ಮೌಲ್ಯ ಜೀವನ್‌ರಾಂ ಸಹಿತ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಹಳೆವಿದ್ಯಾರ್ಥಿಗಳೂ ಈ ಸಾಧನೆಗೆ ಕಾರಣರಾಗಿದ್ದಾರೆ ಎಂದರು.
ಪ್ರಾಚಾರ್ಯ ಡಾ| ಕುರಿಯನ್‌, ಪಿಆರ್‌ಒ ಡಾ| ಪದ್ಮನಾಭ ಶೆಣೈ ಉಪಸ್ಥಿತರಿದ್ದರು.