ಮೂಡುಬಿದಿರೆ, ಮೇ 4: ಪ್ರತಿಯೊಬ್ಬರಿಗೂ ಸಾಧಿಸಬೇಕೆನ್ನುವ ಇಚ್ಚೆ ಇರುತ್ತದೆ. ಆದರೆ ಪೋಷಕರ ತ್ಯಾಗ, ವಾತ್ಸಲ್ಯ, ಗುರುಗಳ ಮಾರ್ಗದರ್ಶನ, ಒಡನಾಡಿಗಳ ಸ್ನೇಹ ಮರೆಯದೆ, ಪರಿಶ್ರಮ, ನೈತಿಕತೆ, ಸಮಾಜಋಣ ತೀರಿಸುವ ಮನೋಭಾವದಿಂದ ಸಾಧಕರಾಗಲು ಪ್ರಯತ್ನಿಸಿ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೈಸ್ಛಾನ್ಸೆಲರ್ ಡಾ| ಸಚ್ಚಿದಾನಂದ್ ಹೇಳಿದರು.
ವಿದ್ಯಾಗಿರಿಯ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ನಡೆದ, ಆಳ್ವಾಸ್ ಎಜುಕೇಶನ್ ಫೌಂಡೇಶನ್ನ 2019ರ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನದಲ್ಲಿ ಶ್ರೇಷ್ಠತೆ ಸಾಧಿಸಲು ಅನ್ಯರೊಂದಿಗೆ ತುಲನೆ ಮಾಡುವುದು ಸರಿ. ಆದರೆ ಎಂದಿಗೂ ಋಣಾತ್ಮಕ ಚಿಂತನೆ ಸಲ್ಲದು. ಕೀಳರಿಮೆ ಕೂಡದು. ಪ್ರತಿಯೊಬ್ಬರಿಗೂ ಬೆಳೆಯುವ, ಬೆಳಗುವ ಎಲ್ಲ ಅವಕಾಶಗಳಿವೆ ಎಂದರು.
ರಾಜೀವ್ ಗಾಂಧಿ ವಿ.ವಿ.ಯ 388 ಮಂದಿ, ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯ 620, ಮಂಗಳೂರು ವಿ.ವಿ.ಯ 1,398 ಮಂದಿ ಹೀಗೆ ಆಳ್ವಾಸ್ ಶಿಕ್ಷಣಾಲಯಗಳ 2,406 ಮಂದಿ ಯಶಸ್ವಿ ವಿದ್ಯಾರ್ಥಿಗಳಿಗೆ ಆಳ್ವಾಸ್ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು.
ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮ್ಯಾನೇಜಿಂಗ್ ಟ್ರಸ್ಟಿ ಎಂ. ವಿವೇಕ್ ಆಳ್ವ, ಟ್ರಸ್ಟಿಗಳಾದ ಅಮರನಾಥ ಶೆಟ್ಟಿ, ಜಯಶ್ರೀ ಎ. ಶೆಟ್ಟಿ, ವಿವಿಧ ಕಾಲೇಜುಗಳ ಪ್ರಾಚಾರ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್ ಸ್ವಾಗತಿಸಿ, ಬಿಎಂಎಲ್ಟಿ ಪ್ರಾಚಾರ್ಯ ಡಾ| ವರ್ಣನ್ ಡಿ’ಸಿಲ್ವ ವಂದಿಸಿದರು. ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ಸ್ತುತಿ ನಿರ್ವಹಿಸಿದರು.