ಬಾಲಿವುಡ್ ನಟಿಯರಾದ ಆಲಿಯಾ ಭಟ್ ಮತ್ತು ಶಾರ್ವರಿ ಅಭಿನಯದ ಬಹುನಿರೀಕ್ಷಿತ ‘ಆಲ್ಫಾ’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಆರಂಭ ಕಂಡಿದೆ. ಶುಕ್ರವಾರ ತೆರೆಕಂಡ ಈ ಆಕ್ಷನ್ ಥ್ರಿಲ್ಲರ್ ಚಿತ್ರವು ಜಾಗತಿಕ ಮಟ್ಟದಲ್ಲಿ ₹17.42 ಕೋಟಿ ಗಳಿಕೆ ದಾಖಲಿಸಿದೆ.
ಚಿತ್ರದ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ (YRF) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮೊದಲ ದಿನದ ಕಲೆಕ್ಷನ್ ವಿವರಗಳನ್ನು ಹಂಚಿಕೊಂಡಿದ್ದು, “ಆಲ್ಫಾ ವಿಶ್ವದಾದ್ಯಂತ ಪ್ರೇಕ್ಷಕರ ಹೃದಯ ಗೆಲ್ಲುತ್ತಿದೆ. ಮೊದಲ ದಿನವೇ ₹17.42 ಕೋಟಿ ಗಳಿಕೆ ದಾಖಲಿಸಿದೆ” ಎಂದು ತಿಳಿಸಿದೆ.
ದೇಶೀಯ ಮತ್ತು ವಿದೇಶಿ ಗಳಿಕೆ
ಮೊದಲ ದಿನ ಭಾರತದಲ್ಲಿ ₹11.20 ಕೋಟಿ ಗಳಿಸಿದರೆ, ವಿದೇಶಿ ಮಾರುಕಟ್ಟೆಯಲ್ಲಿ ₹6.22 ಕೋಟಿ ಸಂಗ್ರಹಿಸಿ ಒಟ್ಟು ₹17.42 ಕೋಟಿ ಕಲೆಕ್ಷನ್ ಮಾಡಿದೆ.
ಮಹಿಳಾ ಪ್ರಧಾನ ಸ್ಪೈ ಚಿತ್ರ
‘ಆಲ್ಫಾ’ ಚಿತ್ರವನ್ನು ಶಿವ್ ರಾವೈಲ್ ನಿರ್ದೇಶಿಸಿದ್ದು, ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಆಲಿಯಾ ಭಟ್, ಶಾರ್ವರಿ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ವಿಶೇಷವೆಂದರೆ, ಇದು ಯಶ್ ರಾಜ್ನ ಜನಪ್ರಿಯ ಸ್ಪೈ ಯೂನಿವರ್ಸ್ನ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ. ಈ ಫ್ರಾಂಚೈಸಿಯಲ್ಲಿ ಈಗಾಗಲೇ ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ವಾರ್’, ‘ಪಠಾಣ್’, ‘ಟೈಗರ್ 3’ ಹಾಗೂ ‘ವಾರ್ 2’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳು ಬಿಡುಗಡೆಯಾಗಿವೆ.
ಮೂರು ಭಾಷೆಗಳಲ್ಲಿ ಬಿಡುಗಡೆ
‘ಆಲ್ಫಾ’ ಚಿತ್ರವು ಶುಕ್ರವಾರ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಿದ್ದು, ವಾರಾಂತ್ಯದಲ್ಲಿ ಇನ್ನಷ್ಟು ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆ ಮೂಡಿಸಿದೆ.

















