ಅಲ್ಪಸಂಖ್ಯಾತ, ಪ್ರಗತಿಪರ ಒಕ್ಕೂಟಗಳಿಂದ ಉಡುಪಿಯಲ್ಲಿ ಪ್ರತಿಭಟನೆ 

ಉಡುಪಿ: ದೇಶದಲ್ಲಿ ದೇಶ ವಿರೋಧಿ, ಸಂವಿಧಾನ ವಿರೋಧಿ, ಗುಂಪು ಹಿಂಸೆ ಹಾಗೂ
ಹತ್ಯೆಗಳನ್ನು ಖಂಡಿಸಿ ದಲಿತ, ಹಿಂದುಳಿದ, ಅಲ್ಪ ಸಂಖ್ಯಾತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಉಡುಪಿ ಇದರ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮ ಚೌಕಿಯ ಎದುರು ಶುಕ್ರವಾರ ಪ್ರತಿಭಟನಾ ಮೆರವಣಿಗೆ ಸಭೆ ನಡೆಯಿತು.
ಚಿತಂಕ ಕೆ. ಫಣಿರಾಜ್‌ ಮಾತನಾಡಿ, ದೇಶದಲ್ಲಿ ಗುಂಪು ಹಲ್ಲೆ ಹಾಗೂ ಹತ್ಯೆಗಳನ್ನು ಮಾಡುವ ಮೂಲಕ ಸಂವಿಧಾನವನ್ನು ನಿಷ್ಕ್ರೀಯಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಅದಕ್ಕೆ ಕೋಮುವಾದಿ ರಾಜಕೀಯವೇ ಪ್ರಮುಖ ಕಾರಣ. 2015ರಿಂದ ಈಚೆಗೆ ದೇಶದಲ್ಲಿ 95 ಗುಂಪು ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ನಡೆದಿವೆ. ಪ್ರತಿಯೊಂದು ಘಟನೆಯಲ್ಲೂ ಹಿಂಸೆ ನಡೆಸಿದ ಗುಂಪುಗಳು ಜಾತಿ, ಮತ ದ್ವೇಷದ ಪ್ರವೃತ್ತಿಯನ್ನು ಬಹಿರಂಗವಾಗಿ ಘೋಷಿಸುತ್ತಿವೆ ಎಂದರು.
ದನ ಸಾಗಾಟ–ಕಳ್ಳತನದ ಆರೋಪ ಹೋರಿಸಿ ತಾವೇ ಕಾನೂನು ಕೈಗೆತ್ತಿಕೊಂಡು ನಿರ್ಭೀತವಾಗಿ ಹತ್ಯೆಗಳನ್ನು ಮಾಡುತ್ತಿದ್ದಾರೆ. ಆದರೆ ಬಹುತೇಕ ಘಟನೆಗಳಲ್ಲಿ ಕಾನೂನು ಪಾಲಕರು ಹಿಂಸೆ ನಡೆಸಿದವರ ಬಗ್ಗೆ ಮೃಧು ಧೋರಣೆ ತಳೆಯುತ್ತಿದ್ದು, ಇದರಿಂದಾಗಿ ನ್ಯಾಯಾಲಯದಲ್ಲಿ ಪ್ರಕರಣಗಳು ಬಿದ್ದುಹೋಗಿ ಅಪರಾಧಿಗಳು ಖುಲಾಸೆಯಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಡಿಸಿದರು.
ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಮಾತನಾಡಿ, ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ. ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕಾರ್ಯ ಆಗುತ್ತಿದೆ. ದಲಿತರು, ಶೋಷಿತರ ಮೇಲೆ ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದೆ. ಇದನ್ನು ಪ್ರಶ್ನಿಸಲು ದೇಶದಲ್ಲಿ ಸಮರ್ಥ ವಿರೋಧ ಪಕ್ಷ ಇಲ್ಲ. ಜನರೇ ವಿರೋಧ ಪಕ್ಷವಾಗಿ
ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಇದೆ ಎಂದರು.
ದಲಿತ ಮುಖಂಡ ಶೇಖರ್‌ ಹೆಜಮಾಡಿ, ಸಿಐಟಿಯು ಜಿಲ್ಲಾ ಅಧ್ಯಕ್ಷ ವಿಶ್ವನಾಥ ರೈ, ಉಡುಪಿ ಜಿಲ್ಲಾ ಮುಸ್ಲಿಮ್‌ ಒಕ್ಕೂಟದ ಇದ್ರೀಸ್‌ ಹೂಡೆ, ಧರ್ಮಗುರು ವಿಲಿಯಂ ಮಾರ್ಟಿಸ್ ಮಾತನಾಡಿದರು.
ದಲಿತ ದಮನಿತರ ಸ್ವಾಭಿಮಾನಿ ಸಮಿತಿಯ ಶ್ಯಾಮ್‌ರಾಜ್‌ ಬಿರ್ತಿ, ದಸಂಸ ಮುಖಂಡರಾದ ಸುಂದರ ಮಾಸ್ತರ್‌, ವಾಸು ನೇಜಾರು, ಎಸ್‌. ನಾರಾಯಣ, ಅಂತಾರಾಷ್ಟ್ರೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಪ್ರಶಾಂತ್‌ ಜತ್ತನ್ನ, ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಶಶಿಧರ ಗೊಲ್ಲ, ಕವಿರಾಜ್‌, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಹುಸೇನ್‌ ಕೋಡಿಬೆಂಗ್ರೆ, ಅನ್ವರ್‌ ಅಲಿ ಕಾಪು, ಮುಹಮ್ಮದ್‌ ಮೌಲಾ, ಇಬ್ರಾಹಿಂ ಮಟಪಾಡಿ, ಅಝೀಝ್‌ ಉದ್ಯಾವರ, ಅಬ್ದುಲ್‌ ಖತೀಬ್‌ ರಶೀದ್‌ ಮೊದಲಾದವರು ಪಾಲ್ಗೊಂಡಿದ್ದರು.