ಹೈದರಾಬಾದ್: ಅಲ್ಲು ಅರ್ಜುನ್, ಫಹಾದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ: ದಿ ರೈಸ್’ ಚಿತ್ರದ ಯಶಸ್ಸಿನ ನಂತರ, ಎಲ್ಲರ ಕಣ್ಣುಗಳು ಈಗ ಅದರ ಭಾಗ ಎರಡರ ಮೇಲೆ ನೆಟ್ಟಿದೆ. ಮೂಲಗಳ ಪ್ರಕಾರ ‘ಪುಷ್ಪಾ: ದಿ ರೂಲ್’ನ ಚಿತ್ರಕಥೆ ಇನ್ನೂ ಬರವಣಿಗೆಯ ಹಂತದಲ್ಲಿದೆ. ಸುಕುಮಾರ್ ಮತ್ತು ಅವರ ಸಿಬ್ಬಂದಿ ಆಗಸ್ಟ್ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದ್ದಾರೆ.
ಕಥಾ ಲೇಖಕ ಸುಕುಮಾರ್ ಆರೋಗ್ಯ ಸ್ಥಿತಿಯ ಕಾರಣದಿಂದಾಗಿ ಚಿತ್ರ ಕಥೆ ಬರೆಯಲು ಸಾಕಷ್ಟು ಸಮಯ ತೆಗೆದುಕೊಂಡಿರುವುದರಿಂದಾಗಿ ಚಿತ್ರೀಕರಣ ಪ್ರಾರಂಭಿಸುವ ಬಗ್ಗೆ ಸ್ಪಷ್ಟತೆ ಇರಲಿಲ್ಲ ಎನ್ನಲಾಗಿದೆ. ಆದರೆ ಈಗ, ಸುಕುಮಾರ್ ಅವರ ಆರೋಗ್ಯ ಚೇತರಿಸಿದ್ದು, ಚಿತ್ರಕಥೆ ಬರೆಯುವಲ್ಲಿ ನಿರತರಾಗಿರುವುದರಿಂದ ಇನ್ನು ಕೆಲವೇ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ವರದಿಯಾಗಿದೆ.
ಇದೂ ಕೂಡಾ ಪ್ಯಾನ್ ಇಂಡಿಯಾ ಚಿತ್ರವಾಗಲಿದ್ದು, ಮೊದಲನೇ ಭಾಗಕ್ಕೆ ಉತ್ತರ ಭಾರತದಲ್ಲಿ ನಿರೀಕ್ಷೆಗೂ ಮೀರಿ ದೊರೆತ ಸ್ಪಂದನೆಯಿಂದಾಗಿ ಎರಡನೇ ಭಾಗವನ್ನು ಇನ್ನೂ ಆದೂರಿಯಾಗಿ ಹೊರತರುವ ಜವಾಬ್ದಾರಿ ಚಿತ್ರ ತಂಡದ ಹೆಗಲೇರಿದೆ. ಇದರಲ್ಲಿ ಅಲ್ಲು ಅರ್ಜುನ್ ಜೊತೆ ಫಹಾದ್ ಫಾಸಿಲ್ ಕೂಡಾ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದು, ಚಿತ್ರದಲ್ಲಿನ ಫಹಾದ್ ಅವರ ಪಾತ್ರವು ಎಲ್ಲರನ್ನು ಬೆರಗುಗೊಳಿಸಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.