ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ವಿಚಾರ ಹಾಗೂ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಮಿತ್ರ ಮಂಡಳಿ ನಾಯಕರಲ್ಲಿ ಆತಂಕ ಶುರುವಾಗಿದೆ.
ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸೂಚನೆ ನೀಡಿದೆ ಎಂಬ ಸುದ್ದಿ ಹೊರ ಬರುತ್ತಿದಂತೆ ಸಚಿವರು ಸಿಎಂ ಬಿಎಸ್ವೈ ಅವರನ್ನು ಭೇಟಿ ಮಾಡಲು ಮುಂದಾಗಿದ್ದು, ಈಗಾಗಲೇ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಕೃಷಿ ಸಚಿವ ಬಿ.ಸಿ ಪಾಟೀಲ್ ಹಾಗೂ ಆರ್.ಆರ್ ನಗರ ಶಾಸಕ ಮುನಿರತ್ನ ಅವರು ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಉಳಿದಂತೆ ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಶ್ರೀಮಂತ್ ಪಾಟೀಲ್, ಗೋಪಾಲಯ್ಯ ಅವರು ಬಿಎಸ್ವೈರನ್ನು ಭೇಟಿ ಮಾಡಿ, ನಮ್ಮನ್ನು ಸಂಪುಟದಿಂದ ಕೈಬಿಡಬಾರದೆಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಪಕ್ಷಾಂತರ ಮಾಡಿ ಚುನಾವಣೆಯಲ್ಲಿ ಗೆದ್ದು ಕೆಲ ನಾಯಕರು ಸಚಿವ ಸ್ಥಾನ ಪಡೆದು ಅಧಿಕಾರ ನಡೆಸಿದ್ದು, ಇನ್ನೂ ಕೆಲವರು ಸಚಿವ ಸ್ಥಾನ ಆಕಾಂಕ್ಷಿಗಳಿದ್ದರು. ಆದರೆ ಸದ್ಯ ಸಿಎಂ ಬದಲಾವಣೆಯಿಂದ ತಮ್ಮ ಸಚಿವ ಸ್ಥಾನ ಭದ್ರವಾಗಿರುತ್ತಾ.?, ಮುಂದಿನ ಚುನಾವಣೆಗೆ ಪಕ್ಷದಿಂದ ಟಿಕೆಟ್ ಸಿಗುತ್ತಾ?, ಬಿಎಸ್ವೈ ಬಳಿಕ ಬರೋ ನಾಯಕರು ತಮ್ಮನ್ನು ಪರಿಗಣಿಸುತ್ತಾರಾ ಎಂಬ ಸಂದೇಹಗಳು ಮಿತ್ರ ಮಂಡಳಿ ಸದಸ್ಯರನ್ನು ಕಾಡುತ್ತಿದೆಯಂತೆ ಎನ್ನಲಾಗಿದೆ.












