ಹೆಬ್ರಿ ಗ್ರಾಮ ಪಂಚಾಯತ್‌ನಲ್ಲಿ ಲಕ್ಷಾಂತರ ರೂಪಾಯಿ ದುರ್ಬಳಕೆ ಆರೋಪ, ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ; ಸಮಗ್ರ ತನಿಖೆಗೆ ಒತ್ತಾಯ

ಹೆಬ್ರಿ: ಹೆಬ್ರಿ ಸಮಾಜ ಮಂದಿರದಲ್ಲಿ ನ. 13ರಂದು ನಡೆದ ಹೆಬ್ರಿ ಗ್ರಾಮ ಪಂಚಾಯತ್‌ನ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಹೆಬ್ರಿ ಗ್ರಾಮ ಪಂಚಾಯತ್‌ನಲ್ಲಿ ಹಿಂದಿನ ಅವಧಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಸದಾಶಿವ ಸೇರ್ವೆಗಾರವರಿಂದ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆಯಾಗಿದೆ ಎಂಬ ಆರೋಪ ತೀವ್ರ ಚರ್ಚೆಗೆ ಗ್ರಾಸವಾಯಿತು.

ಕೋಟ್ಯಂತರ ರೂಪಾಯಿ ವೆಚ್ಚದ ಎಸ್‌ಆರ್‌ಎಂ ಘಟಕದಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿಯಿಂದ ಖರ್ಚು ಮಾಡಿರುವ ಬಗ್ಗೆ ಮಾಹಿತಿಯನ್ನು ಕೇಳಿದಾಗ ತಪ್ಪು ಮಾಹಿತಿಯನ್ನು ನೀಡಿದ್ದು ಯಾಕೆ.
ಎಸ್‌ಆರ್‌ಎಂ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಪಂಚಾಯತ್‌ನಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸದಾಶಿವ ಸರ್ವಗಾರ್ ಅವಧಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ.ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಹಾಗೂ ಲೋಕಾಯುಕ್ತಕ್ಕೆ ದೂರನ್ನು ನೀಡಲಾಗುವುದು.
ಘಟಕಕ್ಕೆ ಬೆಂಕಿ ಬಿದ್ದ ನಂತರ ಹಸಿ ತ್ಯಾಜ್ಯ ವಿಲೇವಾರಿ ವಾಗುತ್ತಿಲ್ಲ . ಆದರೂ ಅಷ್ಟೊಂದು ಸಿಬ್ಬಂದಿಗಳು ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ ಕೆಲವೊಂದು ಕಡೆ ವಾರಕ್ಕೆ ಒಂದು ಬಾರಿ ಮಾತ್ರ ಒಣ ಕಸವನ್ನು ಸಂಗ್ರಹಿಸಲಾಗುತ್ತದೆ. ಆದರೂ ಕೂಡ ಸಾಗಾಟ ವಾಹನಕ್ಕೆ 3006 ಲೀಟರ್ ಡೀಸೆಲ್ ಖರ್ಚಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ ಇದರ ಬಗ್ಗೆ ಕೂಡ ಸಮಗ್ರ ತನಿಖೆ ಆಗಬೇಕು ಎಂದು ನವೀನ್ ಕೆ ಅಡ್ಯಂತಾಯ ಹಾಗೂ ಪಂಚಾಯತ್ ಮಾಜಿ ಅಧ್ಯಕ್ಷ ಎಚ್ ಕೆ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.

ಜನರೇಟರ್ ನಾಪತ್ತೆ!

ದಾನಿಗಳು 12 ವರ್ಷಗಳ ಹಿಂದೆ ನೀಡಿದ ಜನರೇಟರ್ ಪಂಚಾಯತ್ ನಲ್ಲಿ ಐದು ವರ್ಷ ಇತ್ತು ಆನಂತರ ದಿನಗಳಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ವಿಷಯ ತಿಳಿದಿದ್ದಂತೆ ಎರಡು ದಿನದ ಹಿಂದೆ ಮತ್ತೆ ಪಂಚಾಯತಿಗೆ ಜನರೇಟರ್ ಬಂದಿದೆ ಇದು ಎಲ್ಲಿಂದ ಬಂದಿದೆ ಯಾರು ತೆಗೆದುಕೊಂಡು ಹೋಗಿದ್ದಾರೆ. ಪಂಚಾಯತ್ ನಲ್ಲಿದ್ದ ಜೆರಾಕ್ಸ್ ಮೆಷಿನ್ ಪ್ರೊಜೆಕ್ಟರ್ ಕೂಡ ಕಾಣಿಸುತ್ತಿಲ್ಲ. ಒಂದು ವೇಳೆ ಹಳೆಯ ವಸ್ತುವನ್ನು ಮಾರಾಟ ಮಾಡಿದ್ದರೆ ಟೆಂಡರ್ ಕರೆಯಬೇಕಿತ್ತು. ಮಾರಾಟ ಮಾಡಿದ ಹಣ ಎಲ್ಲಿ ಹೋಗಿದೆ.ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಗಣೇಶ್ ಕುಮಾರ್ ಜರ್ವತ್ತು ಆಗ್ರಹಿಸಿದರು.

ಲೋಕಾಯುಕ್ತಕ್ಕೆ ದೂರು ಸಲ್ಲಿಸುವ ಎಚ್ಚರಿಕೆ:

ನವೀನ್ ಅಡ್ಯಂತಾಯ ಸೇರಿದಂತೆ ಗ್ರಾಮಸ್ಥರು ಪಂಚಾಯತ್‌ನ ಹಿಂದಿನ ಅವಧಿಯ ಹಣಕಾಸಿನ ವ್ಯವಹಾರಗಳ ಕುರಿತು ಸಂಪೂರ್ಣ ಲೆಕ್ಕಪತ್ರಗಳನ್ನು ಸಾರ್ವಜನಿಕರಿಗೆ ಒದಗಿಸಬೇಕು, ಒಂದೇ ಕಾಮಗಾರಿಗೆ ಹಲವು ಬಿಲ್ಲುಗಳನ್ನು ಮಾಡಿ ಹಣವನ್ನು ಲೂಟಿ ಮಾಡಿದ್ದಾರೆ. ಬೇರೆ ಬೇರೆ ಅಭಿವೃದ್ಧಿ ಹೆಸರುಗಳಲ್ಲಿ ಲಕ್ಷಗಟ್ಟಲೆ ಹಣ ದುರುಪಯೋಗ ಮಾಡಿದ್ದಾರೆ.
ಬಡಗುಡ್ಡೆ ಕಾಲೋನಿಯಲ್ಲಿ ಕೊರಗಜ್ಜ ದೇವಸ್ಥಾನದ ಬಳಿ ನಡೆದ ಕಾಮಗಾರಿಗೆ ಲಕ್ಷಾಂತರ ಖರ್ಚಾಗಿದೆ ಎಂದು ಹೇಳಿದ್ದೀರಿ ಈ ಬಗ್ಗೆ ಸಮಗ್ರ ಮಾಹಿತಿ ನೀಡಬೇಕೆಂದು ಪಂಚಾಯಿತಿ ಮಾಜಿ ಸದಸ್ಯ ಪುತ್ರನ್ ಅಧಿಕಾರಿಗಳ ಗಮನಕ್ಕೆ ತಂದರು.
ಕಲಿಕಾ ಕೇಂದ್ರದ ದುರಸ್ತಿ ಕಾರ್ಯಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ ಹಾಗೂ ಹೊರ ಭಾಗದಲ್ಲಿ ಅಳವಡಿಸಿದ್ದ ಕನ್ನಡಿಗೆ 72,000 ಖರ್ಚಾಗಿದೆ ಎಂದು ಹೇಳಿದ್ದೀರಿ ಅದರ ಬಗ್ಗೆ ಕೂಡ ಸಮಗ್ರ ತನಿಖೆಯಾಗಬೇಕು. ಹಿಂದಿನ ಅವಧಿಯಲ್ಲಿ 60ಲಕ್ಷ ಉಳಿಕೆ ಆಗಿತ್ತು. ಆದರೆ ಈಗ ಕೇವಲ 9 ಲಕ್ಷ ಉಳಿಕೆ ಎಂದು ಹೇಳಿದ್ದೀರಿ. ಆದರೆ ತೆರಿಗೆ ಸಂಗ್ರಹ ಆಗಿಲ್ಲವೇ. ಆಗದಿದ್ದರೆ ಯಾಕೆ ಆಗಿಲ್ಲ ಈ ಬಗ್ಗೆ ಬಹಿರಂಗಪಡಿಸಬೇಕು. ಜನರ ದುಡ್ಡನ್ನು ಸರ್ವಾಧಿಕಾರ ಧೋರಣೆಯಂತೆ ಖರ್ಚು ಮಾಡಲು ಯಾರಲ್ಲಿ ಕೇಳಿದ್ದೀರಿ.ಈ ಕುರಿತು ದಾಖಲೆಗಳ ಆಧಾರದಲ್ಲಿ ಸಮಗ್ರ ತನಿಖೆಯಾಗಬೇಕು.
ಪಂಚಾಯತ್‌ನ ಎಲ್ಲಾ ಖರ್ಚು ವೆಚ್ಚಗಳ ಮಾಹಿತಿಯನ್ನು ಬಹಿರಂಗಪಡಿಸದಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ವಿವಿಧ ವಿಚಾರಗಳ ಕುರಿತು ಗ್ರಾಮಸ್ಥರಾದ ನಿತೀಶ್ ಎಸ್. ಪಿ.,ರಾಘವೇಂದ್ರ ನಾಯ್ಕ, ಸುಮಾ ಅಡ್ಯಂತಾಯ, ಸುಮಿತ್ರ ಹೆಗ್ಡೆ ಮೊದಲಾದವರು ಮಾತನಾಡಿದರು.

ಕಾಮಗಾರಿಯನ್ನು ಪರಿಶೀಲಿಸಲಾಗುವುದು:

ಗ್ರಾಮಸಭೆಯಲ್ಲಿ ಸಾರ್ವಜನಿಕರು ಹಲವು ಗಂಭೀರ ಆರೋಪಗಳನ್ನು ಆಲಿಸಿದ ಪಂಚಾಯತ್ ಆಡಳಿತ ಅಧಿಕಾರಿ ದಿನೇಶ್ ಅವರು ಮಾತನಾಡಿ ಎಲ್ಲಾ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಕಾಮಗಾರಿಯ ವಿವರವನ್ನು ಪರಿಶೀಲಿಸಲಾಗುವುದು ಎಂದರು.

ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಉಪ ವಲಯ ಅರಣ್ಯಾಧಿಕಾರಿ ಜಯರಾಮ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಂಕರ್ ಸೇರಿಗಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಆಶಾ ಹೆಗ್ಡೆ ವರದಿ ಮಂಡಿಸಿದರು. ಪಿಡಿಒ ಅಶೋಕ್ ಸ್ವಾಗತಿಸಿದರು. ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.