ಉಡುಪಿ: ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮುದ್ರಣ ಮಾಲಕರ ಸಂಘ, ಡಾ. ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಮತ್ತು ಮಣಿಪಾಲ ಸ್ಕಿಲ್ ಡೆವೆಲಪ್ಮೆಂಟ್ ಸೆಂಟರ್ ಇವರ ಸಹಯೋಗದಲ್ಲಿ “ಆಲ್ ಇಂಡಿಯಾ ಪ್ರಿಂಟ್ ಸಮ್ಮಿಟ್-2025” ಅನ್ನು ಡಿ. 12ಮತ್ತು 13ರಂದು ಮಣಿಪಾಲ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಗೌರವಾಧ್ಯಕ್ಷ ಯು. ಮೋಹನ್ ಉಪಾಧ್ಯ ಮತ್ತು ಕಾರ್ಯಾಧ್ಯಕ್ಷ ಎಂ. ಮಹೇಶ್ ಕುಮಾರ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10ಗಂಟೆಗೆ ಮಣಿಪಾಲ್ ಮೀಡಿಯಾ ನೆಟ್ ವರ್ಕ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು ಪೈ ಮತ್ತು ಬೆಂಗಳೂರು printech park cluster ಛೇರ್ಮನ್ ಸಿ.ಆರ್. ಜನಾರ್ಧನ್ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಮುದ್ರಣ ರಂಗಕ್ಕೆ ಸಂಬಂಧಪಟ್ಟಂತೆ ವಸ್ತು ಪ್ರದರ್ಶನ, ಸೆಮಿನಾರ್ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿವೆ ಎಂದರು.
ಈ ಸಮಾವೇಶದಲ್ಲಿ ಪ್ರಸ್ತುತ ಮುದ್ರಣಾಲಯಗಳು ಎದುರಿಸುತ್ತಿರುವ ಕೆಲವೊಂದು ಸಮಸ್ಯೆಗಳಾದ ನುರಿತ ಅನುಭವಿ ಕಾರ್ಮಿಕರ ಕೊರತೆ, ಅನಾರೋಗ್ಯಕರ ಸ್ಪರ್ಧೆ, ತಂತ್ರಜ್ಞಾನದಲ್ಲಿ ಆಗುವ ನಿರಂತರ ಬೆಳವಣಿಗೆಯನ್ನು ಅಳವಡಿಸುವಲ್ಲಿ ಸಂಕಷ್ಟ, ಮಧ್ಯವರ್ತಿಗಳ ಹಾವಳಿ, ಮುಂದಿನ ಪೀಳಿಗೆಗೆ ಮುದ್ರಣ ಕ್ಷೇತ್ರದ ಬಗ್ಗೆ ನಿರಾಸಕ್ತಿ ಹಾಗೂ ಮುದ್ರಣ ಕ್ಷೇತ್ರದ ಭವಿಷ್ಯ ಕುರಿತು ವಿಚಾರ ಸಂಕಿರಣ ನಡೆಯಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಮಾಜಿ ಅಧ್ಯಕ್ಷ ರಮೇಶ ತಿಂಗಳಾಯ, ಉಪಾಧ್ಯಕ್ಷರಾದ ಜಿ.ಎಂ. ಶರೀಫ್, ಸಂತೋಷ ಕುಮಾರ್, ಮುದ್ರಕರ ಸೌಹಾರ್ದ ಸಹಕಾರಿ ಅಧ್ಯಕ್ಷ ಬಿ.ಜಿ. ಸುಬ್ಬರಾವ್ ಇದ್ದರು.

















