ಓಟ ನಿಲ್ಲಿಸಿದ ಕಂಬಳ ಕ್ಷೇತ್ರದ ಸರದಾರ ಚ್ಯಾಂಪಿಯನ್ ಅಲೆವೂರು ಕುಟ್ಟಿ 

ಮಂಗಳೂರು: ಕಳೆದೊಂದು ದಶಕದಿಂದ ಕಂಬಳ ಕ್ಷೇತ್ರದಲ್ಲಿ ಮಿಂಚು ಹರಿಸಿದ್ದ, ದಾಖಲೆಗಳ ಸರದಾರ ಅಲೆವೂರು ಕುಟ್ಟಿ ( ತಡಂಬೈಲ್ ಕುಟ್ಟಿ) ಭಾನುವಾರ ರಾತ್ರಿ ಅಸೌಖ್ಯದಿಂದ ಇಹಲೋಕ ತ್ಯಜಿಸಿದೆ. ಈ ಸುದ್ದಿ ಕೇಳಿದ ಅಪಾರ ಅಭಿಮಾನಿಗಳು ಕಂಬನಿ ಮಿಡಿದ್ದಾರೆ.

ಕುಟ್ಟಿ ನಡೆದು ಬಂದ ಹಾದಿ:
ಮೂಲತಃ ರೆಂಜಾಳ ಸಮೀಪದ ಏದೋಟ್ಟು ರಾಜು ಶೆಟ್ಟಿ ಅವರ ಬಳಿಯಿದ್ದ ಎಳೆಯ ಪ್ರಾಯದ ಕರು ಕುಟ್ಟಿ 2008-09ರ ಸೀಸನ್ ನಲ್ಲಿ ಮೀಯ್ಯಾರಿನಲ್ಲಿ ನಡೆದ ಅಭ್ಯಾಸದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದ. ಅಲ್ಲದೆ, ಮಣಿಪಾಲದಲ್ಲಿ ನಡೆದ ಅನಂತ–ಮಾಧವ ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಮಿಂಚಿದ್ದ.

ಈತನ ಓಟವನ್ನು ಗಮನಿಸಿದ ಅಲೆವೂರು ತೆಂಕುಮನೆ ರಾಘು ಶೆಟ್ಟಿ ಅವರು ತನ್ನ ಮನೆಗೆ ಕೊಂಡುಕೊಂಡರು. ಆ ಬಳಿಕ ಅಲೆವೂರು ಕುಟ್ಟಿ ಎಂದೇ ಮಿಂಚಿದ ಈ‌ ಕೋಣ 2009-10ರ ಸೀಸನ್ ನಲ್ಲಿ ಹಲವಾರು ಕಡೆ ಪ್ರಶಸ್ತಿ ಪಡೆದಿದ್ದನು. ಅಲ್ಲದೇ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಮೂರು ವರ್ಷಗಳ ಕಾಲ ಸರಣಿ ಬಹುಮಾನ ಪಡೆದ ಕುಟ್ಟಿ ಅಲೆವೂರು ತೆಂಕುಮನೆ ರಾಘು ಶೆಟ್ಟಿ ಅವರ ಹೆಸರನ್ನೂ ತುಳುನಾಡಿಗೆ ಪರಿಚಯಿಸಿದ. ಅನಂತರ ಚ್ಯಾಂಪಿಯನ್ ಕುಟ್ಟಿ ಎಂದೇ ಪ್ರಸಿದ್ದಿ ಪಡೆದ.

ಆ ನಂತರ ದಿನಗಳಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಸ್ಪರ್ಧಿಸಿದ ಕುಟ್ಟಿ, ಕರಿಂಜೆ, ಕೊಳಚೂರು ಕೊಂಡೊಟ್ಟು, ಕೊಳಕೆ ಇರ್ವತ್ತೂರು, ಮೂಲ್ಕಿ ಪಯ್ಯೊಟ್ಟು ಮನೆತನದ ಕೋಣಗಳ ಜೊತೆಯಾಗಿ ವಿಜೃಂಭಿಸಿದ್ದ. ಬಳಿಕ ತಂಡಬೈಲ್ ನಾಗೇಶ್ ದೇವಾಡಿಗರು ಕುಟ್ಟಿಯನ್ನು ತಮ್ಮ ಬಳಗಕ್ಕೆ ಸೇರಿಸಿಕೊಂಡರು. ಅಲೆವೂರು ಕುಟ್ಟಿ ಅಲ್ಲಿಂದ ತಡಂಬೈಲ್ ಕುಟ್ಟಿಯಾಗಿ ಬದಲಾದ.

ಕಾರ್ಕಳ ಜೀವನ್ ದಾಸ್ ಅಡ್ಯಂತಾಯ ಮತ್ತು ತಂಡಬೈಲ್ ನಾಗೇಶ್ ದೇವಾಡಿಗರ ಜಂಟಿ ತಂಡದಲ್ಲಿ ಮಿಂಚಿದ್ದು ಚಾಂಪಿಯನ್ ಕೋಣ ಮುಕೇಶ ಮತ್ತು ಕುಟ್ಟಿ. ನಾಲ್ಕೈದು ವರ್ಷಗಳ ಹಿಂದೆ ಮೂಡುಬಿದಿರೆ ಕಂಬಳದಲ್ಲಿ 144.5 ಮೀಟರ್ ದೂರವನ್ನು ಕೇವಲ 14.01 ಸೆಕೆಂಡ್ ನಲ್ಲಿ ಓಡಿ ಕುಟ್ಟಿ-ಮುಕೇಶ ಆ ಕಾಲದ ದಾಖಲೆ ನಿರ್ಮಿಸಿದ್ದರು.

ಹಲವು ದಾಖಲೆಗಳನ್ನು ತನ್ನ ಹೆಸರಿನಲ್ಲಿ ನಿರ್ಮಿಸಿದ ಕುಟ್ಟಿ ಕಳೆದ ಈ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳದಲ್ಲಿ ಕೊನೆಯದಾಗಿ ಭಾಗವಹಿಸಿದ್ದ. ಆದರೆ ಕಳೆದ ಎರಡು‌ಮೂರು ದಿನಗಳಿಂದ ಕುಟ್ಟಿ ಆರೋಗ್ಯದಲ್ಲಿ ದೀಢೀರ್ ಏರುಪೇರು ಕಂಡಿದ್ದು, ಭಾನುವಾರ ರಾತ್ರಿ ಇತಿಹಾಸದ ಪುಟ ಸೇರಿದ್ದಾನೆ.